Publish Date: Fri, 11 Nov 2022 (17:42 IST)
Updated Date: Fri, 11 Nov 2022 (17:44 IST)
ಸಾಮಾಜಿಕ ಜಾಲತಾಣ ಕಂಪನಿಗಳಾದ ಮೆಟಾ ಹಾಗೂ ಟ್ವಿಟರ್ ಬೆನ್ನಲ್ಲೇ ಇದೀಗ ಅಮೆರಿಕದ ಟೆಕ್ ಮತ್ತು ಇ-ಕಾಮರ್ಸ್ ಕಂಪನಿ ಅಮೆಜಾನ್ ಕೂಡ ಉದ್ಯೋಗಿಗಳನ್ನು ವಜಾಗೊಳಿಸಲು ಆರಂಭಿಸಿದೆ ಎಂದು ವರದಿಯಾಗಿದೆ. ಆರ್ಥಿಕ ಕುಸಿತದ ಈ ಸಂದರ್ಭದಲ್ಲಿ ಕಂಪನಿಗೆ ಲಾಭದಾಯಕವಾಗಿರದ ಉಪಕ್ರಮಗಳನ್ನು ತಡೆಹಿಡಿಯಬೇಕಾದ ಅನಿವಾರ್ಯತೆ ಇದೆ ಎಂದು ಅಮೆಜಾನ್ ಹೇಳಿದೆ. ನೇಮಕಾತಿ ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆಹಿಡಿದಿರುವುದಾಗಿ ಕಳೆದ ವಾರವಷ್ಟೇ ಅಮೆಜಾನ್ ಘೋಷಿಸಿತ್ತು. ತಮ್ಮನ್ನು ಕಂಪನಿ ಕೆಲಸದಿಂದ ವಜಾಗೊಳಿಸಿದೆ ಎಂದು ಅಮೆಜಾನ್ ಉದ್ಯೋಗಿ, ಸಾಫ್ಟ್ವೇರ್ ಎಂಜಿನಿಯರ್ ಜೇಮಿ ಝಾಂಗ್ ಎಂಬುವವರು ಲಿಂಕ್ಡ್ಇನ್ನಲ್ಲಿ ಸಂದೇಶ ಪ್ರಕಟಿಸಿದ್ದಾರೆ. ಅಮೆಜಾನ್ ರೋಬೊಟಿಕ್ಸ್ AIನಲ್ಲಿ ನನ್ನ ಒಂದೂವರೆ ವರ್ಷದ ಉದ್ಯೋಗ ಮುಕ್ತಾಯಗೊಂಡಿದೆ. ಅಚ್ಚರಿಯ ವಜಾದೊಂದಿಗೆ ಉದ್ಯೋಗ ಕೊನೆಗೊಂಡಿದೆ. ನಮ್ಮ ಇಡೀ ರೋಬೊಟಿಕ್ಸ್ ತಂಡವನ್ನೇ ವಜಾಗೊಳಿಸಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಲಿಂಕ್ಡ್ಇನ್ ಮಾಹಿತಿ ಪ್ರಕಾರ ಅಮೆಜಾನ್ನ ರೋಬೊಟಿಕ್ಸ್ ತಂಡದಲ್ಲಿ 3,766 ಉದ್ಯೋಗಿಗಳಿದ್ದಾರೆ. ವಾಸ್ತವದಲ್ಲಿ ಎಷ್ಟು ಉದ್ಯೋಗಿಗಳು ಇದ್ದಾರೆ ಎಂಬುದನ್ನು ಇನ್ನಷ್ಟೇ ದೃಢಪಡಿಸಿಕೊಳ್ಳಬೇಕಿದೆ.