Publish Date: Wed, 06 Nov 2024 (09:43 IST)
Updated Date: Wed, 06 Nov 2024 (09:47 IST)
ಉಡುಪಿ: ಕಾರ್ಕಳ ತಾಲೂಕಿನ ಅಜೆಕಾರ್ ಬಾಲಕೃಷ್ಣ ಮರ್ಡರ್ ಕೇಸ್ ಗೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬಾಲಕೃಷ್ಣಗೆ ವಿಷ ಹಾಕಿದ್ದ ಪತ್ನಿ ಪ್ರಿತಮಾಳ ಮತ್ತೊಂದು ಖತರ್ನಾಕ್ ಕೃತ್ಯ ಬಯಲಾಗಿದೆ.
ಅಜೆಕಾರ್ ಬಾಲಕೃಷ್ಣ ಕೊಲೆ ಪ್ರಕರಣ ಇಡೀ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಪತ್ನಿ ಪ್ರತಿಮಾ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತದೆಂದು ಪ್ರಿಯಕರ ದಿಲೀಪ ಹೆಗ್ಡೆ ಜೊತೆ ಸೇರಿಕೊಂಡು ಹಲವು ಸಮಯದಿಂದ ಪತಿ ಬಾಲಕೃಷ್ಣಗೆ ವಿಷ ಪ್ರಾಶನ ಮಾಡಿಸುತ್ತಿದ್ದಳು. ಹಾಗಿದ್ದರೂ ಆತ ಹುಷಾರಾಗಿ ಬಂದನೆಂಬ ಸಿಟ್ಟಿನಲ್ಲಿ ಪ್ರಿಯಕರನ ಜೊತೆ ಸೇರಿಕೊಂಡು ಪತಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು.
ಈ ಪ್ರಕರಣದಲ್ಲಿ ಪ್ರತಿಮಾ ಸಹೋದರ ಸಂದೀಪ್ ಅವರೇ ತಂಗಿಯ ವಿರುದ್ಧ ನಿಂತು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ತನಗೂ ಸಹೋದರಿ ಪ್ರತಿಮಾ ವಿಷ ಪ್ರಾಶನ ಮಾಡಿಸಿದ್ದಾಳೆ ಎಂದು ಸಂದೀಪ್ ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳಿಂದ ತನಗೂ ಆರೋಗ್ಯ ಸಮಸ್ಯೆಯಾಗುತ್ತಿದೆ. ಕತ್ತು, ಕಾಲಿನ ಸ್ನಾಯು ಸೆಳೆತವಾಗಿದೆ. ವಿಪರೀತ ತೂಕ ಕಳೆದುಕೊಂಡಿದ್ದೇನೆ. ಈಗ ನಾನೂ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುತ್ತೇನೆ. ಒಂದು ದಿನ ನಾನೂ ಆಕೆಯ ಮನೆಯಲ್ಲಿ ಊಟ ಮಾಡಿದ್ದೆ. ಹೀಗಾಗಿ ನನಗೂ ವಿಷ ಹಾಕಿರಬಹುದು ಎಂದು ಅನುಮಾನವಿದೆ. ಯಾಕೆಂದರೆ ಅವಳ ದಾರಿಗೆ ಅಡ್ಡವಾಗಿದ್ದು ನಾನೇ ಎಂದು ಹೇಳಿದ್ದಾರೆ.
ಈ ಮೂಲಕ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಈಗ ವಿಚಾರಣೆ ಹಂತದಲ್ಲಿ ಆರೋಪಿಗಳಾದ ಪ್ರತಿಮಾ ಮತ್ತು ದಿಲೀಪ್ ಹೆಗ್ಡೆ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದಲ್ಲಿ ದಿಲೀಪ್ ಹೆಗ್ಡೆಯನ್ನು ರಕ್ಷಿಸಲು ಅವರ ಕುಟುಂಬದಿಂದ ಪ್ರಭಾವ ಬೀರಲಾಗುತ್ತಿದೆ ಎಂಬ ಆರೋಪವನ್ನೂ ಬಾಲಕೃಷ್ಣ ಕುಟುಂಬಸ್ಥರು ಮಾಡಿದ್ದಾರೆ. ಹೀಗಾಗಿ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಮನವಿ ಮಾಡಿದ್ದಾರೆ.