Publish Date: Sat, 26 Oct 2024 (15:06 IST)
Updated Date: Sat, 26 Oct 2024 (15:10 IST)
ಕಾರ್ಕಳ: ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಗೆ ಸ್ಲೋ ಪಾಯಿಸನ್ ನೀಡಿ ಹತ್ಯೆ ಮಾಡಿದ ಕಾರ್ಕಳದ ಅಜೆಕಾರ್ ನ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಪ್ರಕರಣ ಎಲ್ಲಿಗೆ ಬಂದು ನಿಂತಿದೆ ಎಂಬ ವಿವರ ಇಲ್ಲಿದೆ.
ಪತಿ ಬಾಲಕೃಷ್ಣಗೆ ಸ್ಲೋ ಪಾಯಿಸನ್ ನೀಡಿ ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ಹೋಟೆಲ್ ಮಾಲಿಕನಾಗಿದ್ದ ದಿಲೀಪ್ ಜೊತೆ ಪ್ರತಿಮಾಗೆ ಅಕ್ರಮ ಸಂಬಂಧವಿತ್ತು. ದಿಲೀಪ್ ನೀಡಿದ್ದ ವಿಷವನ್ನು ಪ್ರತಿಮಾ ಪ್ರತಿನಿತ್ಯ ಪತಿ ಬಾಲಕೃಷ್ಣಗೆ ಊಟದಲ್ಲಿ ಮಿಕ್ಸ್ ಮಾಡಿ ನೀಡುತ್ತಿದ್ದಳು.
ಪರಿಣಾಮ ಬಾಲಕೃಷ್ಣ ಅಸ್ವಸ್ಥನಾಗಿದ್ದ. ಆತನನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಚೇತರಿಸಿಕೊಂಡು ಮನೆಗೆ ಬಂದಿದ್ದರು. ಆದರೆ ಒಂದೂವರೆ ತಿಂಗಳು ವಿಷ ನೀಡಿದರೂ ಆತ ಸಾಯದೇ ಇದ್ದಿದ್ದರಿಂದ ಪ್ರತಿಮಾ ಮನೆಯಲ್ಲಿ ಯಾರೂ ಇಲ್ಲದೇ ಇರುವಾಗ ರಾತ್ರಿ ಪ್ರಿಯಕರ ದಿಲೀಪ್ ನನ್ನು ಕರೆಸಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.
ಪ್ರಕರಣ ಸಂಬಂಧ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇದೀಗ ಪ್ರತಿಮಾಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ ಪ್ರಿಯಕರ ದಿಲೀಪ್ ನನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಬಾಲಕೃಷ್ಣನಿಗೆ ಯಾವ ವಿಷ ನೀಡಲಾಗಿದೆ, ಎಲ್ಲಿಂದ ಖರೀದಿಸಲಾಗಿದೆ ಇತ್ಯಾದಿ ಮಾಹಿತಿಯನ್ನು ಪೊಲೀಸರು ಕಲೆ ಹಾಕಬೇಕಿದೆ. ಹೀಗಾಗಿ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.