Publish Date: Tue, 29 Oct 2024 (13:32 IST)
Updated Date: Tue, 29 Oct 2024 (13:39 IST)
ಕಾರ್ಕಳ: ಪತಿಗೆ ಸ್ಲೋ ಪಾಯಿಸನ್ ನೀಡಿ, ಬಳಿಕ ಉಸಿರುಗಟ್ಟಿಸಿ ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ಪತ್ನಿ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಮಾಡಿದ ಖತರ್ನಾಕ್ ಪ್ಲ್ಯಾನ್ ಈಗ ಬಹಿರಂಗವಾಗಿದೆ.
ದಿಲೀಪ್ ಜೊತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂದು ಪ್ರತಿಮಾ ದಿನಾ ತನ್ನ ಪತಿಗೆ ವಿಷವುಣಿಸಿದ್ದರಿಂದ ಆತ ತೀವ್ರ ಅಸ್ವಸ್ಥನಾಗಿದ್ದ. ಕೊನೆಗೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಹೇಗೋ ಗುಣಮುಖರಾಗಿ ಮನೆಗೆ ಬಂದಿದ್ದ ಬಾಲಕೃಷ್ಣರನ್ನು ಪ್ರತಿಮಾ ಮತ್ತು ದಿಲೀಪ್ ಸೇರಿಕೊಂಡು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನೂ ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಇದೀಗ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ನವಂಬರ್ 7 ರವರೆಗೆ ಅವರ ನ್ಯಾಯಾಂಗ ಬಂಧನ ಅವಧಿಯಿದೆ. ಈ ನಡುವೆ ಬಾಲಕೃಷ್ಣಗೆ ಯಾವ ಪಾಯಿಸನ್ ನೀಡಲಾಗಿತ್ತು ಎಂಬ ವಿಚಾರವನ್ನು ದಿಲೀಪ್ ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದ.
ಆರ್ಸೆನಿಕ್ ಎಂಬ ವಿಷವನ್ನು ಆಹಾರದಲ್ಲಿ ಬೆರೆಸಿ ಕೊಡಲಾಗುತ್ತಿತ್ತು ಎಂದು ತನಿಖೆಯಿಂದ ಗೊತ್ತಾಗಿದೆ. ಇದನ್ನು ಕಾರ್ಕಳದ ಲ್ಯಾಬ್ ನಿಂದ ದಿಲೀಪ್ ತಂದುಕೊಟ್ಟಿದ್ದ. ವಿಶೇಷವೆಂದರೆ ಇದಕ್ಕಾಗಿ ಆತ ಗೂಗಲ್ ನಲ್ಲಿ ಸಾಕಷ್ಟು ಸ್ಟಡಿ ಮಾಡಿದ್ದ ಎನ್ನಲಾಗಿದೆ. ಯಾವ ವಿಷ ನೀಡಿದರೆ ವ್ಯಕ್ತಿಗೆ ಸಾವಾಗುತ್ತದೆ ಎಂದು ತಿಳಿದುಕೊಂಡಿದ್ದ ಎನ್ನಲಾಗಿದೆ.
ಇದೀಗ ವಿಚಾರಣೆ ವೇಳೆ ಈ ಯೋಜನೆ ನಿನ್ನೆ ಮೊನ್ನೆಯದಲ್ಲ. ಜೂನ್ ನಲ್ಲೇ ದಿಲೀಪ್ ವಿಷ ಖರೀದಿ ಮಾಡಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಜೂನ್ ನಲ್ಲೇ ತನ್ನ ಲ್ಯಾಬ್ ಗೆ ಬೇಕಾಗುತ್ತದೆ ಎಂದು ಸುಳ್ಳು ಹೇಳಿ ಕಾರ್ಕಳದ ಲ್ಯಾಬ್ ನಿಂದ ದಿಲೀಪ್ ವಿಷ ಖರೀದಿ ಮಾಡಿದ್ದ. ಆದರೆ ಬಾಲಕೃಷ್ಣಗೆ ವಿಷ ನೀಡಲು ಶುರು ಮಾಡಿದ್ದು ಆಗಸ್ಟ್ ನಿಂದ ಎಂದು ತಿಳಿದುಬಂದಿದೆ. ಆದರರೆ ಇದೊಂದೇ ವಿಷ ಹಾಕಲಾಗಿದೆಯೇ ಅಥವಾ ಬೇರೆ ವಿಷಾಂಶವನ್ನು ಬೆರೆಸಲಾಗಿದೆಯೇ ಎಂದು ತನಿಖೆಯಿಂದ ತಿಳಿದುಬರಬೇಕಿದೆ.