ಬಳ್ಳಾರಿ: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಪರಿಸ್ಥಿತಿ ನೋಡಿ ಕೆಂಡಾಮಂಡಲರಾಗಿರುವ ಅವರ ಪರ ವಕೀಲರು ಇಂದು ಜೈಲು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ದರ್ಶನ್ ರನ್ನು ಸಾಮಾನ್ಯ ಖೈದಿಯಂತೆ ಟ್ರೀಟ್ ಮಾಡಲಾಗುತ್ತಿದೆ. ಹಾಗಿದ್ದರೂ ನನಗೆ ಬೆನ್ನು ನೋವಿನ ಸಮಸ್ಯೆಯಿದೆ ಚೇರ್ ಕೊಡಿ ಎಂದು ಅವರು ಮೊದಲು ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇದಕ್ಕೆ ನ್ಯಾಯಾಲಯದ ಒಪ್ಪಿಗೆ ಬೇಕೆಂದು ಹೇಳಿದ್ದರಿಂದ ನ್ಯಾಯಾಲಯಕ್ಕೂ ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಆದರೆ ಜೈಲು ಮ್ಯಾನ್ಯುವಲ್ ನಲ್ಲಿ ಏನಿದೆ ಆ ಪ್ರಕಾರ ಎಲ್ಲಾ ನೀಡುತ್ತಾರೆ ಎಂದು ನ್ಯಾಯಾಧೀಶರು ಹೇಳಿದ್ದರು.
ಇದರ ಬೆನ್ನಲ್ಲೇ ಮತ್ತೆ ದರ್ಶನ್ ಜೈಲು ಅಧಿಕಾರಿಗಳ ಬಳಿ ಚೇರ್ ಗೆ ಮನವಿ ಮಾಡಿದರೂ ಕೋರ್ಟ್ ನಿಂದ ಲಿಖಿತ ಅಧಿಕೃತ ಆದೇಶ ಬಾರದೇ ಕೊಡಲ್ಲ ಎಂದಿದ್ದರು. ಇದಾದ ಬಳಿಕ ದರ್ಶನ್ ತಮ್ಮನ್ನು ಭೇಟಿ ಮಾಡಲು ಬಂದ ವಕೀಲರು, ಪತ್ನಿ ವಿಜಯಲಕ್ಷ್ಮಿ ಬಳಿ ಈ ವಿಚಾರ ಹೇಳಿಕೊಂಡಿದ್ದರು.
ಹೀಗಾಗಿ ಇಂದು ಜೈಲಿಗೆ ಬಂದ ದರ್ಶನ್ ಪರ ವಕೀಲರು ಜೈಲು ನಿಯಮದ ಪ್ರಕಾರ ಕೊಡಬೇಕಾದ ಮೂಲಭೂತ ಸೌಕರ್ಯಗಳನ್ನು ಕೊಡಿ ಎಂದು ವಾದ ಮಾಡಿದ್ದಾರೆ. ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿದ ವಕೀಲರು ದರ್ಶನ್ ಅವರಿಗೆ ಬೆನ್ನು ನೋವು ಕಾಡುತ್ತಿದೆ. ಆದರೆ ಅವರಿಗೆ ಮೂಲಭೂತ ಸೌಕರ್ಯವನ್ನೂ ನೀಡಲಾಗುತ್ತಿಲ್ಲ. ದೇಶದಲ್ಲಿರುವ ಪ್ರತಿಯೊಬ್ಬ ಆರೋಪಿಯೂ ಮೂಲಭೂತ ಸೌಕರ್ಯ ಪಡೆಯುವ ಹಕ್ಕು ಹೊಂದಿದ್ದಾನೆ. ಹಾಸಿಗೆ, ದಿಂಬು, ಕನ್ನಡಿ, ಆರ್ ಒ ನೀರನ್ನು ಒದಗಿಸಬೇಕು. ದರ್ಶನ್ ಮಾತ್ರವಲ್ಲ, ಎಲ್ಲಾ ಖೈದಿಗಳಿಗೂ ಇಷ್ಟನ್ನು ಕೊಡಿ. ಇದು ಖೈದಿಗಳ ಹಕ್ಕು ಎಂದು ಜೈಲು ಅಧಿಕಾರಿಗಳಿಗೆ ಮನವರಿಕೆ ಮಾಡಿರುವುದಾಗಿ ವಕೀಲರು ಹೇಳಿದ್ದಾರೆ.