ಬಳ್ಳಾರಿ: ಇಷ್ಟು ದಿನ ಅಭಿಮಾನಿಗಳು ಸಿಂಹಾಸನದಲ್ಲೇ ಕೂರಿಸಿದ್ದರು. ಆದರೆ ಈಗ ಹತ್ಯೆ ಪ್ರಕರಣದಲ್ಲಿ ಸಿಲುಕಿಕೊಂಡು ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಈಗ ಒಂದು ಪ್ಲಾಸ್ಟಿಕ್ ಚೇರ್ ಗಾಗಿ ಜೈಲು ಅಧಿಕಾರಿಗಳೊಂದಿಗೆ ಗುದ್ದಾಡುತ್ತಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಗ ನಟ ದರ್ಶನ್ ಗೆ ರಾಜಾತಿಥ್ಯ ಸಿಗುತ್ತಿತ್ತು. ಆದರೆ ಇದೇ ತಪ್ಪಿಗೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ ಬಳಿಕ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಮಾಡಲಾಗಿದ್ದು, ನಿಯಮ ಮೀರಿ ಏನನ್ನೂ ನೀಡುತ್ತಿಲ್ಲ.
ಅದರಲ್ಲೂ ಸಾಮಾನ್ಯ ಖೈದಿಗಳಂತೇ ದರ್ಶನ್ ರನ್ನೂ ಟ್ರೀಟ್ ಮಾಡಲಾಗುತ್ತಿದೆ. ದರ್ಶನ್ ಗೆ ಬೆನ್ನು ನೋವಿದ್ದು ಈ ಕಾರಣಕ್ಕೆ ನೆಲದಲ್ಲಿ ಕೂರಲು ಕಷ್ಟವಾಗುತ್ತಿದೆ, ಚೇರ್ ಕೊಡಿ ಎಂದು ಕೇಳಿದ್ದರು. ಆದರೆ ಅಧಿಕಾರಿಗಳು ಕೊಟ್ಟಿರಲಿಲ್ಲ. ಹೀಗಾಗಿ ಜಡ್ಜ್ ಮುಂದೆಯೂ ದರ್ಶನ್ ಪರ ವಕೀಲರು ಈ ವಿಚಾರವನ್ನು ಹೇಳಿದ್ದರು. ಆಗ ಜಡ್ಜ್ ಜೈಲು ನಿಯಮದ ಪ್ರಕಾರ ಏನು ಕೊಡಬೇಕೋ ಅದನ್ನು ಕೊಡುತ್ತಾರೆ ಎಂದಿದ್ದರು.
ಇದೀಗ ಬಳ್ಳಾರಿ ಜೈಲಿಗೆ ಬಂದು ಎರಡು ವಾರವೇ ಕಳೆದಿದೆ. ಇನ್ನೂ ದರ್ಶನ್ ಗೆ ಜೈಲು ಅಧಿಕಾರಿಗಳು ಚೇರ್ ಕೊಟ್ಟಿಲ್ಲ. ಹೀಗಾಗಿ ಅವರ ಗರಂ ಆಗಿದ್ದು ಅಧಿಕಾರಿಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಕೋರ್ಟ್ ನ ಅಧಿಕೃತ ಆದೇಶ ಬಂದ ಬಳಿಕವೇ ಚೇರ್ ಕೊಡುತ್ತೇವೆ ಎಂದು ಜೈಲು ಅಧಿಕಾರಿಗಳು ಉತ್ತರಿಸಿದ್ದಾರೆ. ಹೀಗಾಗಿ ದರ್ಶನ್ ತಣ್ಣಗಾಗಿದ್ದಾರೆ ಎನ್ನಲಾಗಿದೆ.