ಬಳ್ಳಾರಿ: ನಟ ದರ್ಶನ್ ಬೇಡಿಕೆಯಂತೆ ಕೊನೆಗೂ ಜೈಲಿನಲ್ಲಿ ಅವರಿಗೆ ಟಿವಿ ಭಾಗ್ಯ ದೊರೆತಿದೆ. ಆದರೂ ಬೇಕು ಬೇಕಾದ ಚಾನೆಲ್ ಎಲ್ಲಾ ನೋಡುವ ಅವಕಾಶ ಅವರಿಗಿಲ್ಲ ಎನ್ನಲಾಗಿದೆ.
ಬಳ್ಳಾರಿ ಜೈಲಿಗೆ ಬಂದ ಬಳಿಕ ನಟ ದರ್ಶನ್ ಗೆ ಮೊದಲ ನಾಲ್ಕು ದಿನ ಟಿವಿ ಇರಲಿಲ್ಲ. ಆದರೆ ಅವರು ಟಿವಿಗೆ ಬೇಡಿಕೆಯಿಟ್ಟ ಕಾರಣ ಜೈಲಿನಲ್ಲಿ ಹಾಳಾಗಿ ಬಿದ್ದಿದ್ದ ಟಿವಿಯೊಂದನ್ನು ರಿಪೇರಿ ಮಾಡಿಕೊಡಲಾಗಿತ್ತು. ಆದರೆ ಒಂದೇ ದಿನದಲ್ಲಿ ಆ ಟಿವಿ ಮತ್ತೆ ಹಾಳಾಗಿತ್ತು. ಹೀಗಾಗಿ ಮತ್ತೆ ಟಿವಿಯಿಲ್ಲದೇ ದರ್ಶನ್ ಕಳೆಯಬೇಕಾಯಿತು.
ಇದರಿಂದ ದರ್ಶನ್ ಜೈಲು ಅಧಿಕಾರಿಗಳ ವಿರುದ್ಧವೇ ಹರಿಹಾಯ್ದಿದ್ದರು. ನಿಯಮದ ಪ್ರಕಾರ ಏನು ನೀಡಬೇಕೋ ಅದನ್ನೂ ನೀಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು. ನಿನ್ನೆ ಕೋರ್ಟ್ ನಲ್ಲೂ ದರ್ಶನ್ ಪರ ವಕೀಲರು ಜೈಲು ಅಧಿಕಾರಗಳು ಚೇರ್ ಕೂಡಾ ನೀಡುತ್ತಿಲ್ಲ ಎಂದು ದೂರಿದ್ದರು. ಇದಕ್ಕೆ ನ್ಯಾಯಾಧೀಶರು ಜೈಲು ನಿಯಮದ ಪ್ರಕಾರ ಏನು ನೀಡಬೇಕೋ ಅದನ್ನು ನೀಡುತ್ತಾರೆ ಬಿಡಿ ಎಂದಿದ್ದರು.
ಇದೀಗ ಕೊನೆಗೂ ದರ್ಶನ್ ಗೆ ಟಿವಿ ರಿಪೇರಿ ಮಾಡಿಕೊಡಲಾಗಿದೆ. ಆದರೆ ಈ ಟಿವಿಯಲ್ಲಿ ಅವರಿಗೆ ಬೇಕು ಬೇಕಾದ ಚಾನೆಲ್ ಗಳನ್ನೆಲ್ಲಾ ವೀಕ್ಷಿಸಲು ಅವಕಾಶವಿಲ್ಲ. ಕೇವಲ ಸರ್ಕಾರೀ ಒಡೆತನದ ದೂರದರ್ಶನ ಚಾನೆಲ್ ಮಾತ್ರ ಬರುತ್ತಿದೆ. ಖಾಸಗಿ ವಾಹಿನಿಗಳನ್ನು ವೀಕ್ಷಿಸಲು ಅವಕಾಶವಿಲ್ಲ. ಹೀಗಾಗಿ ಟಿವಿ ಬಂದರೂ ಒಂದೇ ಚಾನೆಲ್ ನೋಡಿಕೊಂಡು ಇರಬೇಕಾದ ಪರಿಸ್ಥಿತಿಯಿದೆ.