Publish Date: Tue, 04 Sep 2018 (15:40 IST)
Updated Date: Tue, 04 Sep 2018 (15:43 IST)
ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವನ್ನ ಉಲ್ಲಂಘಿಸಿದ ಕಾರಣ ಉಪವಿಭಾಗಾಧಿಕಾರಿಗಳ ಕಚೇರಿಯ ಪಿಠೋಪಕರಣಗಳನ್ನ ಜಪ್ತಿ ಮಾಡಿದ ಪ್ರಕರಣ ನಡೆದಿದೆ.
ವಿಜಯಪುರ ನಗರದಲ್ಲಿ ಈ ಘಟನೆ ನಡೆದಿದೆ. ವಿಜಯಪುರ ಉಪವಿಭಾಗಾಧಿಕಾರಿಗಳ ಕಚೇರಿಯ ಪೀಠೋಪಕರಣಗಳನ್ನ ಜಪ್ತಿ ಮಾಡಲಾಗಿದೆ. ವಿಜಯಪುರ ನಗರದ ಹೊರವಲಯದ ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಇದರಲ್ಲಿ ಮಹಲ ಬಾಗಾಯತ ಕಂದಾಯ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ 953 ಎಂಬ ಜಮೀನು ಭೂಸ್ವಾಧೀನಕ್ಕೊಳಪಟ್ಟಿತ್ತು. ಸ್ಥಳೀಯ ವಿಕ್ರಂ ಎನ್ನುವವರ ಮಾಲೀಕತ್ವದ ಈ ಜಮೀನಿನಲ್ಲಿನ ಹತ್ತು ಗುಂಟೆ & ಒಂಭತ್ತು ಗುಂಟೆ ಜಮೀನು ಭೂಸ್ವಾಧೀನಕ್ಕೊಳಪಟ್ಟಿತ್ತು. ಆದರೆ ಹೆಚ್ಚುವರಿ ಪರಿಹಾರ ಮೊತ್ತ ಕೋರಿ ವಿಜಯಪುರದ ಎರಡನೇ ಅಪರ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ವಿಕ್ರಂ ಎರಡು ಪ್ರತ್ಯೆಕ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಹೆಚ್ಚುವರಿ ಮೊತ್ತ 27 ಲಕ್ಷ, ಮತ್ತು 30 ಲಕ್ಷ ಸೇರಿದಂತೆ ಒಟ್ಟಾರೆಯಾಗಿ 1 ಕೋಟಿ 40 ಲಕ್ಷ, 82 ಸಾವಿರದ 497 ರೂಪಾಯಿಗಳನ್ನ ಭರಣಾ ಮಾಡಿಕೊಡುವಂತೆ ನ್ಯಾಯಾಲಯ 2012ರ ಫೆಬ್ರುವರಿ 9 ರಂದು ಆದೇಶಿಸಿತ್ತು. ಆದರೆ ಭೂಸ್ವಾಧೀನಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿಗಳು ಹೆಚ್ಚುವರಿ ಮೊತ್ತ ಭರಣಾ ಮಾಡಿಕೊಡುವಲ್ಲಿ ವಿಫಲರಾಗುವುದಲ್ಲದೇ ನ್ಯಾಯಾಲಯದ ಆದೇಶವನ್ನ ಉಲ್ಲಂಘನೆ ಮಾಡಿದ್ದರು. ಕಾರಣ ಕಕ್ಷಿದಾರರ ಪರವಾಗಿ ನ್ಯಾಯಾಲಯದ ಆದೇಶ ಪಡೆದ ನ್ಯಾಯವಾದಿ ಸಂಗಮೇಶ ಡೊಂಗರಗಾಂವಿ ಎನ್ನುವವರು ಇಂದು ಉಪವಿಭಾಗಾಧಿಕಾರಿಗಳ ಕಚೇರಿಯ ಪಿಠೋಪಕರಣಗಳನ್ನ ಜಪ್ತಿ ಮಾಡಿದ್ದಾರೆ. ಉಪವಿಭಾಗಾಧಿಕಾರಿಗಳು ಕಚೇರಿಯಲ್ಲಿಲ್ಲದ ಕಾರಣ ಅವರ ವಾಹನವನ್ನ ಜಪ್ತಿ ಮಾಡಲಾಗಿಲ್ಲ. ಇವುಗಳನ್ನ ಹರಾಜು ಹಾಕಿ ಪರಿಹಾರ ಮೊತ್ತ ಭರಣಾ ಮಾಡಿಕೊಳ್ಳುವುದಾಗಿ ತಿಳಿಸಿದ ನ್ಯಾಯವಾದಿಗಳು, ಇನ್ನುಳಿದ ಪರಿಹಾರ ಮೊತ್ತವನ್ನ ಪಾವತಿಸುವಲ್ಲಿ ಮತ್ತಷ್ಟು ವಿಳಂಬ ಮಾಡಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.