ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ರೈಲಿನ ಹಳಿಗೆ ತಳ್ಳಿ ಯುವಕನನ್ನು ಹತ್ಯೆ ಮಾಡಿದ ಪ್ರಕರಣ ಸಂಬಂಧ ಆರೋಪಿಯೊಬ್ಬನ್ನು ಬೈಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೃತ ಯುವಕ ವಿಜಯಪುರ ಮೂಲದ ಇಸ್ಮಾಯಿಲ್ ಪಟವೇಗಾರ್. ಆರೋಪಿ ಪುನೀತ್‍ನನ್ನು ಪೊಲೀಸರು ಬಂಧಿಸಿದ್ದಾರೆ.
ಇಸ್ಮಾಯಿಲ್ ಹಾಗೂ ಪುನೀತ್ ಇಬ್ಬರೂ ಒಂದೇ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇಬ್ಬರು ಸ್ನೇಹಿತರಾಗಿದ್ದು, ಒಂದೇ ಪಿಜಿಯಲ್ಲಿ ವಾಸವಾಗಿದ್ದರು. ಪುನೀತ್ ಪ್ರೀತಿಸುತ್ತಿದ್ದ ಯುವತಿಗೆ ಇಸ್ಮಾಯಿಲ್ ಪದೇ ಪದೇ ಕರೆ ಮಾಡುತ್ತಿದ್ದ. ಇಸ್ಮಾಯಿಲ್‍ನ ಈ ನಡೆ ಪುನೀತ್‍ನ ಮತ್ತೋರ್ವ ಸ್ನೇಹಿತ ಪ್ರತಾಪ್‍ನ ಸಿಟ್ಟಿಗೆ ಕಾರಣವಾಗಿತ್ತು.
ಅದೇ ವಿಚಾರವಾಗಿ ಇಸ್ಮಾಯಿಲ್‍ನೊಂದಿಗೆ ಪುನೀತ್ ಹಾಗೂ ಪ್ರತಾಪ್‍ಗೆ ಜಗಳವಾಗಿತ್ತು. ಸೆ.7ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ದೊಡ್ಡನೆಕ್ಕುಂದಿ ಬಳಿ ಪುನೀತ್ ಹಾಗೂ ಪ್ರತಾಪ್ ಮದ್ಯಪಾನ ಸೇವನೆ ಮಾಡಿ ಕುಳಿತಿದ್ದರು. ಅದೇ ವೇಳೆ ಅಲ್ಲಿಗೆ ಇಸ್ಮಾಯಿಲ್ ಬಂದಾಗ ಮತ್ತೆ ಗಲಾಟೆ ನಡೆದಿತ್ತು ಎನ್ನಲಾಗಿದೆ.
ಇದೇ ವೇಳೆ ಇಸ್ಮಾಯಿಲ್‌ನನ್ನು ಚಲಿಸುತ್ತಿದ್ದ ರೈಲಿಗೆ ಪ್ರತಾಪ್ ಹಾಗೂ ಪುನೀತ್ ತಳ್ಳಿದ್ದಾರೆ. ನಂತರ ಮೃತದೇಹವನ್ನು ಪುನಃ ರೈಲ್ವೆ ಹಳಿ ಮೇಲಿರಿಸಿ ಪರಾರಿಯಾಗಿದ್ದರು ಎಂದು ರೈಲ್ವೇ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ಆರೋಪಿ ಪುನೀತ್‍ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೋರ್ವ ಆರೋಪಿ ಪ್ರತಾಪ್‍ಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.