Select Your Language

Notifications

webdunia
webdunia
webdunia
webdunia

BBMPಯಲ್ಲಿ 828 ಕೋಟಿ ದುರ್ಬಳಕೆ!

BBMPಯಲ್ಲಿ 828 ಕೋಟಿ ದುರ್ಬಳಕೆ!
ಬೆಂಗಳೂರು , ಗುರುವಾರ, 11 ನವೆಂಬರ್ 2021 (09:19 IST)
ಬೆಂಗಳೂರು : ಬಿಬಿಎಂಪಿಯ 2018-19ನೇ ಸಾಲಿನ ಹಣಕಾಸು ನಿರ್ವಹಣೆಯಲ್ಲಿ ಭಾರಿ ಅಕ್ರಮ ನಡೆದಿದ್ದು, 828.36 ಕೋಟಿ ರೂ. ದುರ್ಬಳಕೆಯಾಗಿರುವುದು ಲೆಕ್ಕ ಪರಿಶೋಧನಾ ವರದಿಯಿಂದ ಬೆಳಕಿಗೆ ಬಂದಿದೆ.
ಇದರಲ್ಲಿ 684.11 ಕೋಟಿ ರೂ. ಮೊತ್ತಕ್ಕೆ ಆಕ್ಷೇಪಣೆ ಸಲ್ಲಿಸಿದ್ದು, 144.25 ಕೋಟಿಗಳನ್ನು ಅಧಿಕಾರಿಗಳು, ಗುತ್ತಿಗೆದಾರರಿಂದ ವಸೂಲು ಮಾಡಲು ಶಿಫಾರಸು ಮಾಡಲಾಗಿದೆ.
ಪಾಲಿಕೆಯ 2018-19ನೇ ಸಾಲಿನ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ 879 ಪುಟಗಳ ಲೆಕ್ಕ ಪರಿಶೋಧನಾ ವರದಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ಸಾಮಾನ್ಯ ಆಡಳಿತ, ಶಿಕ್ಷಣ, ಕಂದಾಯ, ಆರೋಗ್ಯ ಮತ್ತು ಕಾಮಗಾರಿ ವಿಭಾಗಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಬಯಲು ಮಾಡಲಾಗಿದೆ. ಈ ಐದು ವಿಭಾಗಗಳಲ್ಲಿ ನಡೆದಿರುವ ಕಾನೂನುಬಾಹಿರ ಪಾವತಿ, ಅನುಮೋದಿತ ದರಕ್ಕಿಂತ ಹೆಚ್ಚು ಪಾವತಿ, ಅಧಿಕಾರಿಗಳ ಕರ್ತವ್ಯಲೋಪದಿಂದ ಉಂಟಾಗಿರುವ ನಷ್ಟ, ಪಾಲಿಕೆಗೆ ಸಂದಾಯವಾದ ಮೊತ್ತವನ್ನು ಬೊಕ್ಕಸಕ್ಕೆ ಪಾವತಿಸದಿರುವುದು ಹಾಗೂ ಇನ್ನಿತರೆ ನ್ಯೂನತೆಗಳ ಕುರಿತು ಅಂಕಿ-ಅಂಶಗಳ ಸಹಿತ ವಿವರಣಾತ್ಮಕ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪಾಲಿಕೆಯು ಕಾಮಗಾರಿಗಳನ್ನು ನಿರ್ವಹಿಸಿರುವ ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ, ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿದೆ. ಆಸ್ತಿ ತೆರಿಗೆ ಮತ್ತು ಇನ್ನಿತರೆ ಮೂಲಗಳಿಂದ ಸಂಗ್ರಹವಾಗುತ್ತಿರುವ ವರಮಾನವು ದೈನಂದಿನ ಆಡಳಿತ ನಿರ್ವಹಣೆಗಷ್ಟೇ ಸಾಕಾಗುತ್ತಿದೆ. ರಸ್ತೆ ಅಭಿವೃದ್ಧಿ, ನಿರ್ವಹಣೆ, ಮೇಲ್ಸೇತುವೆ, ಅಂಡರ್ಪಾಸ್, ವೈಟ್ಟಾಪಿಂಗ್, ಟೆಂಡರ್ಶ್ಯೂರ್ ಸೇರಿದಂತೆ ಇತರೆ ಬೃಹತ್ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನಕ್ಕಾಗಿ ಸರಕಾರದ ಮುಂದೆ ಕೈಯೊಡ್ಡುವಂತಾಗಿದೆ. ಪಾಲಿಕೆಯು ವಾರ್ಷಿಕ 10 ಸಾವಿರ ಕೋಟಿಗಿಂತ ಹೆಚ್ಚು ಮೊತ್ತದ ಆಯವ್ಯಯ ಮಂಡಿಸುತ್ತಿದೆ. ಲೆಕ್ಕ ಪರಿಶೋಧನಾ ವರದಿಯಂತೆ ಬಜೆಟ್ನ ಶೇ 7 ರಿಂದ ಶೇ 8ರಷ್ಟು ಮೊತ್ತವು ಭ್ರಷ್ಟರ ಪಾಲಾಗುತ್ತಿರುವ ಆರೋಪಗಳು ಕೇಳಿಬರುತ್ತಿವೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸ ಕೊಟ್ಟ ಒಡೆಯನ ಹೆಂಡತಿಯನ್ನೇ ಫಿನಿಶ್ ಮಾಡಿದ ಪಾಪಿ!