ದೇಶದಲ್ಲಿನ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 358 ಓಮಿಕ್ರಾನ್ ಪ್ರಕರಣಗಳಿವೆ. ಈ ಪೈಕಿ 114 ಪ್ರಕರಣಗಳು ಗುಣಮುಖರಾಗಿರುವುದಾಗಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಶುಕ್ರವಾರ ತಿಳಿಸಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ಹೆಚ್ಚಿನ ಸಕ್ರಿಯ ಪ್ರಕರಣಗಳೊಂದಿಗೆ ಟಾಪ್ ಐದು ರಾಜ್ಯಗಳಾಗಿವೆ ಎಂದು ಅವರು ಹೇಳಿದರು.
183 ಓಮಿಕ್ರಾನ್ ಪ್ರಕರಣಗಳನ್ನು ಕೇಂದ್ರ ಆರೋಗ್ಯ ಸಚಿವಾಲಯದಿಂದ ವಿಶ್ಲೇಷಿಸಲಾಗಿದ್ದು, ಶೇಕಡಾ 39 ರಷ್ಟು ಪ್ರಕರಣಗಳು ಮಹಿಳೆಯರಾಗಿದ್ದು, ಉಳಿದ ಪ್ರಕರಣಗಳಲ್ಲಿ ಪುರುಷರಾಗಿದ್ದಾರೆ. ದೇಶದಲ್ಲಿ ಶೇ. 89 ರಷ್ಟು ವಯಸ್ಕರು ಮೊದಲು ಡೋಸ್ ಲಸಿಕೆ ಪಡೆದಿದ್ದಾರೆ ಶೇಕಡಾ 61 ರಷ್ಟು ಅರ್ಹ ಜನರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಭೂಷಣ್ ತಿಳಿಸಿದರು.
ಪ್ರಧಾನ ಮಂತ್ರಿ ಮಂತ್ರಿ, ಆರೋಗ್ಯ ಸಚಿವರು, ದೇಶದಲ್ಲಿನ ಕೋವಿಡ್-19 ಹಾಗೂ ಓಮಿಕ್ರಾನ್ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಕೋವಿಡ್-19 ನಿಯಮಗಳನ್ನು ಪಾಲಿಸಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದ ಭೂಷಣ್, ವೈಜ್ಞಾನಿಕ ಸಾಕ್ಷ್ಯಧಾರದ ಮೇಲೆ ಬೂಸ್ಟರ್ ಡೋಸ್ ಕುರಿತು ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು.
ಡೆಲ್ಟಾ ರೂಪಾಂತರಿ ಈಗಲೂ ದೇಶದಲ್ಲಿ ಪ್ರಬಲವಾಗಿರುವುದಾಗಿ ಹೇಳಿದ ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ, ಕೋವಿಡ್ ನಿಯಮ ಪಾಲನೆಯಲ್ಲಿ ನಿರ್ಲಕ್ಷ್ಯ ವಹಿಸಬಾರದೆಂದು ಜನತೆಗೆ ಸಲಹೆ ನೀಡಿದರು. ಓಮಿಕ್ರಾನ್ ಅತ್ಯಂತ ವೇಗದಲ್ಲಿ ಹರಡಲಿದ್ದು, 1.5-3 ದಿನಗಳಲ್ಲಿ ದುಪ್ಪಟ್ಟು ಆಗುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಡಿಸೆಂಬರ್ 7 ರಂದು ಹೇಳಿದ್ದು, ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ರಾಜೇಶ್ ಭೂಷಣ್ ತಿಳಿಸಿದರು.