ಸಿಡಿಲು ಬಡಿದು 11 ಜನ ಸಾವು!
ದುರಂತದ ವೇಳೆ ವಾಚ್ ಟವರ್ ಮೇಲೆ 27 ಜನರು ಇದ್ದರು ಎನ್ನಲಾಗಿದೆ.
ಜೈಪುರ (ಜುಲೈ.12); ಉತ್ತರ ಭಾರತದಲ್ಲಿ ಕಳೆದ ಹಲವು ದಿನಗಳಿಂದ ಬಾರೀ ಮಳೆಯಾಗುತ್ತಿದೆ. ಅದರಲ್ಲೂ ರಾಜಸ್ಥಾನ ಮತ್ತು ಉತ್ತರಪ್ರದೇಶದಲ್ಲಿ ಮಳೆ ಎಡೆಬಿಡದೆ ಸುರಿಯುತ್ತಿದೆ. ಸಿಡಿಲಿನ ಅಬ್ಬರವೂ ಈ ವರ್ಷ ಜೋರಾಗಿದ್ದು, ಈವರೆಗೆ ಉತ್ತರ ಭಾರತದಲ್ಲಿ 28ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ.
ಈ ನಡುವೆ ರಾಜಸ್ತಾನದಲ್ಲಿ 18 ಜನ ಸಿಡಿಲಿಗೆ ಬಲಿಯಾಗಿದ್ದಾರೆ. ಈ ಪೈಕಿ 11 ಜನ ಭಾನುವಾರ ಜೈಪುರದ ಅರಮನೆ ಗೋಪುರದ ಮೇಲೆ ನಿಂತು ಒಟ್ಟಾಗಿ ಸೆಲ್ಪೀ ತೆಗೆದುಕೊಳ್ಳುತ್ತಿದ್ದ ವೇಳೆ ಮಿಂಚು ತಾಕಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ರಾಜಸ್ಥಾನದ ಜೈಪುರ ಸಮೀಪದ 12ನೇ ಶತಮಾನದ ಅಮೆರ್ ಪ್ಯಾಲೆಸ್ ಬಳಿಯ ವಾಚ್ ಟವರ್ನಲ್ಲಿ ಭಾನುವಾರ ಈ ಘಟನೆ ಸಂಭವಿಸಿದ್ದು, ಸಿಡಿಲು ಬಡಿದು 11 ಜನ ಸ್ಥಳದಲ್ಲೇ ಮೃತಪಟ್ಟಿದ್ದರೆ, 11 ರಿಂದ 12 ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಅಮೆರ್ ಪ್ಯಾಲೆಸ್ ಬಳಿಯ ವಾಚ್ ಟವರ್ ಮೇಲೆ ಜನರು ಮಳೆಯಲ್ಲೇ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಸಿಡಿಲು ಬಡಿದ ಪರಿಣಾಮ ಈ ದುರಂತ ಸಂಭವಿಸಿದೆ. ಕೆಲವರು ಸಿಡಿಲಿನ ಭಯಕ್ಕೆ ವಾಚ್ ಟವರ್ ಮೇಲಿಂದ ಧುಮುಕಿ ಗಾಯಗೊಂಡಿದ್ದಾರೆ ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ."ಇದುವರೆಗೆ 11 ಜನರು ಸಾವನ್ನಪ್ಪಿದ್ದಾರೆ. 11 ರಿಂದ 12 ಜನರು ಗಾಯಗೊಂಡಿದ್ದಾರೆ" ಎಂದು ಜೈಪುರ ಪೊಲೀಸ್ ಆಯುಕ್ತ ಆನಂದ್ ಶ್ರೀವಾಸ್ತವ ತಿಳಿಸಿದ್ದಾರೆ."ಭಾನುವಾರ ರಾತ್ರಿ 7.30 ರ ಸುಮಾರಿಗೆ ಅಮೆರ್ ಕೋಟೆಯ ಎದುರಿನ ಬೆಟ್ಟಗಳಲ್ಲಿರುವ ವಾಚ್ ಟವರ್ನಲ್ಲಿ ಸಿಡಿಲು ಮಿಂಚು ಬಡಿದು ಈ ಘಟನೆ ನಡೆದಿದೆ. ದುರಂತದ ಸ್ಥಳದಲ್ಲೇ ಒಂಬತ್ತು ಮೃತದೇಹಗಳು ಪತ್ತೆಯಾಗಿವೆ. ಮೃತಪಟ್ಟವರಲ್ಲಿ ಹೆಚ್ಚಿನವರು ಯುವಕರು" ಎಂದು ಅಮೆರ್ ಪೊಲೀಸ್ ಠಾಣೆ ಎಸ್ಎಚ್ಒ ಶಿವನಾರಾಯಣ್ ಹೇಳಿದ್ದಾರೆ.
ಘಟನೆಯ ನಂತರ, ಆರೋಗ್ಯ ಸಚಿವ ರಘು ಶರ್ಮಾ ಅವರು ಗಾಯಾಳುಗಳನ್ನು ದಾಖಲಿಸಿದ್ದ ಎಸ್ಎಂಎಸ್ ಆಸ್ಪತ್ರೆಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದ್ದಾರೆ. ದುರಂತದ ವೇಳೆ ವಾಚ್ ಟವರ್ ಮೇಲೆ 27 ಜನರು ಇದ್ದರು ಎನ್ನಲಾಗಿದೆ