Select Your Language

Notifications

webdunia
webdunia
webdunia
webdunia

ಸೂಪರ್ ಚಿತ್ರವಿಮರ್ಶೆ; ಉಪ್ಪಿಗಿಂತ ರುಚಿ ಬೇರೆ ಇಲ್ಲ

ಸೂಪರ್ ಚಿತ್ರವಿಮರ್ಶೆ; ಉಪ್ಪಿಗಿಂತ ರುಚಿ ಬೇರೆ ಇಲ್ಲ
PR
ಚಿತ್ರ: ಸೂಪರ್
ತಾರಾಗಣ: ಉಪೇಂದ್ರ, ನಯನತಾರಾ, ತುಲಿಪ್ ಜೋಶಿ, ಸಾಧು ಕೋಕಿಲಾ
ನಿರ್ದೇಶನ: ಉಪೇಂದ್ರ
ಸಂಗೀತ: ವಿ. ಹರಿಕೃಷ್ಣ
ಛಾಯಾಗ್ರಹಣ: ಅಶೋಕ್ ಕಶ್ಯಪ್

ತನ್ನ ನಿರ್ದೇಶನದ ಯಾವುದೇ ಚಿತ್ರದಲ್ಲೂ ಉಪೇಂದ್ರ ನಿರಾಸೆ ಮಾಡಿದವರಲ್ಲ. ಅದು ಈ ಬಾರಿಯೂ ರುಜುವಾತಾಗಿದೆ. ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವುದನ್ನು ಮತ್ತೊಮ್ಮೆ ಸಾರಿದ್ದಾರೆ. ಅಮೋಘ ಹತ್ತು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿರುವ ಉಪ್ಪಿ ತಾನೇಕೆ ಡಿಫರೆಂಟ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಎಂದಿನಂತೆ ಅವರು ಆರಿಸಿಕೊಂಡಿರುವುದು ಸಾಮಾಜಿಕ ಸಮಸ್ಯೆಗಳನ್ನು. ಅದರಲ್ಲಿಯೂ ನಮ್ಮ ಬಹುಮುಖಿ ಜೀವನದ ಪ್ರಮುಖ ಅಂಗವಾದ ರಾಜಕೀಯವನ್ನು. ಇನ್ನೆರಡು ದಶಕಗಳ ನಂತರ ಹೇಗಿರುತ್ತದೆ ಎಂಬುದನ್ನು ಸೂಪರ್ ಆಗಿಯೇ ಹೇಳಿದ್ದಾರೆ.

ಪ್ರಸಕ್ತ ನಡೆಯುತ್ತಿರುವ ರಾಜಕಾರಣ ಮತ್ತು ಅದರಲ್ಲಿ ಪಾಲ್ಗೊಂಡಿರುವ ರಾಜಕಾರಣಿಗಳು ನೋಡಬೇಕಾದ ಚಿತ್ರವಿದು. ಮುಂದಿನ ವ್ಯವಸ್ಥೆ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕ ನೋಡಲೇಬೇಕಾದ ಚಿತ್ರವಿದು.

ಉಪ್ಪಿ ಅಭಿಮಾನಿಗಳಿಗೆ ನಿರಾಸೆಯಾಗದ ರೀತಿಯಲ್ಲಿ ಚಿತ್ರದ ತುಂಬಾ ಉಪ್ಪಿ ಕಮಾಲ್ ಸರಕುಗಳೇ ಇವೆ. ತನ್ನ ಚಿತ್ರಕ್ಕೆ ಯಾಕೆ ಹೆಸರಿಟ್ಟಿಲ್ಲ ಎನ್ನುವ ಪ್ರಶ್ನೆ ಚಿತ್ರಮಂದಿರದಿಂದ ಹೊರಗೆ ಬಂದಾಗ ಯಾವುದೇ ಪ್ರೇಕ್ಷಕನಲ್ಲಿ ಇರದಂತಹ ಚಿತ್ರ ಉಪೇಂದ್ರ ಬತ್ತಳಿಕೆಯಿಂದ ಬಂದಿದೆ.

ಉಪೇಂದ್ರ ಸ್ಟೈಲ್, ಪಂಚಿಂಗ್ ಡಯಲಾಗ್‌ಗಳು, ಉನ್ನತ ತಂತ್ರಜ್ಞಾನ, ಬೆಡಗು ಬಿನ್ನಾಣ ಇವು ಚಿತ್ರದಲ್ಲಿ ಗಮನ ಸೆಳೆಯುವ ಅಂಶಗಳು.

'ಗಾಂಧಿ ಎಂಡ್ ಗಾಂಧಿ ಕಂಪನಿ' ಎಂಬ ಬಿಲಿಯನೇರ್ ಕಂಪನಿಯ ಲಂಡನ್‌ ವಾಸಿ ಸುಭಾಷ್ ಚಂದ್ರ ಗಾಂಧಿ (ಉಪೇಂದ್ರ) ಅಪ್ಪಟ ಭಾರತಾಂಬೆಯ ಅಭಿಮಾನಿ. ಆತನಿಗೆ ಗಂಟು ಬೀಳುವ ನೃತ್ಯಪಟು ಇಂದಿರಾ (ನಯನತಾರಾ) ನಮ್ಮ ಮನೆ ಹುಡುಗಿಯಾಗಿರಬಹುದೆಂಬ ಅಪಾರ ವಿಶ್ವಾಸದೊಂದಿಗೆ ಪ್ರೀತಿಸಲು ಆರಂಭಿಸಿರುತ್ತಾನೆ. ಆದರೆ ಆಕೆ ಆತನ ಜೀವನದ ಜತೆ ಆಟಕ್ಕಿಳಿಯುತ್ತಾಳೆ.

ಇಲ್ಲಿ ಪ್ರೀತಿ, ಸೇಡಿನ ಹೆಸರಿನಲ್ಲಿ ಗಾಂಧಿ ದೇಶಕ್ಕೆ ವಾಪಸ್ಸಾಗುತ್ತಾನೆ. ಆಕೆ ಎಸೆಯುವ ಸವಾಲು ಗಾಂಧಿಯ ಬದುಕನ್ನೇ ಬದಲಾಯಿಸುತ್ತದೆ. ಇಂದಿರಾಳ ನಿಜಬಣ್ಣ ಬಯಲಾಗುತ್ತದೆ.

ನಂತರದ ಭಾಗ ಭಾರತದ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುತ್ತದೆ. ಈ ನಡುವೆ ಗಾಂಧಿಯ ಕೊಲೆ ಯತ್ನ ನಡೆಯುತ್ತದೆ. ಗಾಂಧಿಯಂತೂ ಜನ ಸಾಮಾನ್ಯನ ಕಷ್ಟಗಳನ್ನು ಪರಿಹರಿಸಲು ದಾರಿ ಯಾವುದು ಎಂದು ಹುಡುಕುತ್ತಿರುತ್ತಾನೆ. ಸಮಾಜವನ್ನು ಬಡಿದೆಬ್ಬಿಸುವ ನಿಟ್ಟಿನಲ್ಲಿ ಹಲವು ತಂತ್ರಗಳನ್ನು ಪ್ರಯೋಗಿಸುತ್ತಾನೆ. ಭಾರತದಲ್ಲಿ ರೌಡಿಗಳ ಬಹುರಾಷ್ಟ್ರೀಯ ಕಂಪನಿಯನ್ನು ತೆರೆಯುತ್ತಾನೆ. ಭಾರೀ ಡೀಲ್‌ಗಳನ್ನು ಮಾಡುತ್ತಾನೆ.
webdunia
PR

ಈ ಸಮಾಜದಲ್ಲಿ ದುಡ್ಡು ಎಷ್ಟು ಪ್ರಾಮುಖ್ಯತೆ ಪಡೆಯುತ್ತದೆ ಎಂಬುದನ್ನು ತೋರಿಸುತ್ತಲೇ ಕರ್ನಾಟಕದ ಮುಖ್ಯಮಂತ್ರಿಯಾಗುತ್ತಾನೆ. ಆದರೆ ಆತನ ಪಾಲಿಗೆ ಸಿಎಂ ಎಂಬ ಪದದ ಅರ್ಥ ಚೀಫ್ ಮಿನಿಸ್ಟರ್ ಅಲ್ಲ, ಕಾಮನ್ ಮ್ಯಾನ್. ಪತ್ನಿಯನ್ನೇ ರೇಪ್ ಮಾಡುವ, ರಾಜ್ಯವನ್ನೇ ಮಾರಾಟ ಮಾಡುವ ಚಿಂತನೆಗಳು ಇಲ್ಲಿ ಹರಿದು ಹೋಗುತ್ತವೆ. ಇಂತಹ ಹತ್ತು ಹಲವು ಕುತೂಹಲಗಳನ್ನು ಬೆಚ್ಚಗೆ ನೋಡಲು ಚಿತ್ರಮಂದಿರಕ್ಕೇ ಹೋಗಬೇಕು.

ಮೊದಲರ್ಧದ ಹೊತ್ತಿನಲ್ಲೇ ಪ್ರೇಕ್ಷಕನ ಹಣ ಬಂದು ಬಿಡುತ್ತದೆ. ಉಳಿದರ್ಧ ಬೋನಸ್. ಮನರಂಜನೆ ಅಥವಾ ಬೋಧನೆ -- ಇವೆರಡರಿಂದಲೂ ಪ್ರೇಕ್ಷಕ ಮಿಸ್ ಆಗದ ಚಿತ್ರವಿದು. ತನ್ನ ಎಂದಿನ ಶೈಲಿಯಲ್ಲಿ ರಾಜಕೀಯವನ್ನು ಮಿಶ್ರಗೊಳಿಸಿ ಎಲ್ಲೂ ಬೋರ್ ಹೊಡೆಯದಂತೆ, ಪ್ರತಿಯೊಬ್ಬರ ಹೃದಯಕ್ಕೂ ತಟ್ಟುವಂತೆ ಚಿತ್ರವನ್ನು ನಿರೂಪಿಸುವುದು ಉಪ್ಪಿಗೆ ಮಾತ್ರ ಸಾಧ್ಯ ಎಂಬ ಭಾವನೆ ಯಾರಿಗಾದರೂ ಬರದೇ ಇರದು.

ಈಗಾಗಲೇ ಹೇಳಿರುವಂತೆ ಉಪ್ಪಿ ಚಿತ್ರಕಥೆ, ಸಂಭಾಷಣೆ ಬಗ್ಗೆ ಎರಡು ಮಾತಿಲ್ಲ. ಅವರ ನಟನೆಯಂತೂ ಮಾರ್ವಲಸ್. ಗಾಂಧಿಯನ್ನು ದ್ವೇಷಿಸುವ ಪಾತ್ರದಲ್ಲಿ ನಯನತಾರಾ ಸೂಪರ್. ವಸ್ತ್ರವಿರೋಧಿಯಾಗಿ ಕಾಣಿಸುವ ತುಲಿಪ್ ಜೋಶಿಗೆ ಅವಕಾಶ ಕಡಿಮೆ.

ಸಾಧು ಕೋಕಿಲಾ ಮತ್ತು ತೆಲುಗು ನಟ ಆಲಿ ಪ್ರೇಕ್ಷಕರನ್ನು ನಗಿಸುತ್ತಾರೆ. ಅವರಿಬ್ಬರೂ ಇಲ್ಲಿ 'ಚಡ್ಡಿ ಬ್ರದರ್ಸ್'. ನಡುವೆ ಮಾಜಿ ಸಚಿವ ಹಾಲಪ್ಪನವರ ಅತ್ಯಾಚಾರ ಪ್ರಕರಣವೂ ಹಾದು ಹೋಗುತ್ತದೆ.

ಲಂಡನ್ ಮತ್ತು ಬೆಂಗಳೂರನ್ನು ಸುಂದರವಾಗಿ ತೋರಿಸಿದ ಕೀರ್ತಿ ಅಶೋಕ್ ಕಶ್ಯಪ್ ಅವರದ್ದು. ಸಿಕ್ಕಾಪಟ್ಟೆ ಇಷ್ಟಪಟ್ಟೆ ಹಾಡಂತೂ ಕುಣಿದು ಕುಪ್ಪಳಿಸುವಂತೆ ಮಾಡುತ್ತದೆ. ಸೂಪರ್ ರಂಗಾ ಕೂಡ ಸೂಪರ್. ಯಾವ ಹಾಡುಗಳೂ ನಿರಾಸೆ ಮೂಡಿಸುವುದಿಲ್ಲ. 2030 ಹೇಗಿರಬಹುದು ಎಂಬುದನ್ನು ಅದ್ಭುತವಾಗಿ ತೋರಿಸಲಾಗಿದೆ.

ಉಪೇಂದ್ರ ತಲೆ ಖಾಲಿಯಾಗಿದೆ ಎಂದೆಲ್ಲ ಅಣಕಿಸುತ್ತಿದ್ದವರ ತಲೆ ಗಿರ್ರ್ ಅನ್ನುವಂತಹ ಉತ್ತರವನ್ನು ಉಪ್ಪಿ ನಿರ್ದೇಶಕನಾಗಿ ನೀಡಿದ್ದಾರೆ.

ಹಾಗೆ ಟೀಕಿಸುವವರು, ಪ್ರಜ್ಞಾವಂತ ನಾಗರಿಕರು, ರಾಜಕಾರಣಿಗಳು 'ಸೂಪರ್' ನೋಡದೇ ಇರುವುದು ಭಾರತೀಯ ದಂಡ ಸಂಹಿತೆಯ ಒಂದು ವಿಧಿಯ ಪ್ರಕಾರ ಅಪರಾಧವಾಗಿರುತ್ತದೆ, ಎಚ್ಚರಿಕೆ!

ಸಂಬಂಧಪಟ್ಟ ಸುದ್ದಿಗಳು:
** ಬಿಡುಗಡೆಗೆ ಮೊದಲೇ 'ಸೂಪರ್' ಹಿಟ್; ಉಪ್ಪಿ ರಾಜಕೀಯಕ್ಕೆ?
** 'ಸೂಪರ್' ಬಗ್ಗೆ ಅಂಬಿ, ಸುದೀಪ್, ದರ್ಶನ್, ಗಣೇಶ್ ಏನಂತಾರೆ?
** ಉಪ್ಪಿ ನಮ್ಮ ಗುರು, ನಾನು ಅವರ ಫ್ಯಾನ್: ಯೋಗರಾಜ್ ಭಟ್
** ಉಪ್ಪಿ 'ಸೂಪರ್' ಡಿ.3ಕ್ಕೆ ತೆರೆಗೆ; ಇಲ್ಲಿದೆ ಫೋಟೋ ಗ್ಯಾಲರಿ
** ನಕಲಿ ಆಡಿಯೋ ವಿರುದ್ಧ ಉಪೇಂದ್ರ 'ಸೂಪರ್' ಹೋರಾಟ
** ಉಪ್ಪಿ ನಿರ್ದೇಶನದಲ್ಲಿ ಪುನೀತ್; ಪಾರ್ವತಮ್ಮ ಏನಂತಾರೆ?
** ನಾನು ಮಾಡುವುದು ಪ್ರಯೋಗ, ಗಿಮಿಕ್ ಅಲ್ಲ: ಉಪೇಂದ್ರ
** ಉಪೇಂದ್ರ ಆಡಿಯೋ ಬಿಡುಗಡೆಯಲ್ಲಿ 'ಸೂಪರ್' ಡ್ರಾಮಾ
** ಟೇಕ್‌ಗೆ ಮಿಸ್ ಸೇರಿ ಮಿಸ್ಟೇಕ್ - ಇದು ಉಪ್ಪಿ ಸ್ಯಾಂಪಲ್
** ಮಿಸ್, ಮಿಸ್‌ಯೂಸ್, ಮಿಸ್ಟೇಕ್..? ಇದು ಉಪ್ಪಿ 'ಸೂಪರ್' ಬಿಟ್ಸ್

Share this Story:

Follow Webdunia kannada