Select Your Language

Notifications

webdunia
webdunia
webdunia
webdunia

ಬಿಡುಗಡೆಗೆ ಮೊದಲೇ 'ಸೂಪರ್' ಹಿಟ್; ಉಪ್ಪಿ ರಾಜಕೀಯಕ್ಕೆ?

ಬಿಡುಗಡೆಗೆ ಮೊದಲೇ 'ಸೂಪರ್' ಹಿಟ್; ಉಪ್ಪಿ ರಾಜಕೀಯಕ್ಕೆ?
PR
ಕ್ಷಮಿಸಿ, ಇಲ್ಲಿ ಎರಡು ಸುದ್ದಿಗಳಿವೆ. ಮೊದಲನೆಯದ್ದು ಉಪೇಂದ್ರ ನಿರ್ದೇಶನ-ನಟನೆಯ 'ಸೂಪರ್' ಚಿತ್ರ ಬಿಡುಗಡೆಗೆ ಮೊದಲೇ ಬಂಡವಾಳವನ್ನು ವಾಪಸ್ ಪಡೆದುಕೊಂಡಿರುವುದು. ಎರಡನೇ ಸುದ್ದಿ ಉಪ್ಪಿ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆಯೇ ಎನ್ನುವುದು. ಈ ಬಗ್ಗೆ ಸ್ವತಃ ಉಪ್ಪಿಯೇ ಬಾಯ್ಬಿಟ್ಟಿದ್ದಾರೆ.

ರಾಕ್‌ಲೈನ್ ವೆಂಕಟೇಶ್ ಹಣ ಹಾಕಿರುವ ಸೂಪರ್ ಚಿತ್ರ ಇದೇ ಶುಕ್ರವಾರ (ಡಿಸೆಂಬರ್ 3) ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಚಿತ್ರದ ಹಕ್ಕುಗಳನ್ನೆಲ್ಲ ಮಾರಾಟ ಮಾಡುವ ಮೂಲಕ ರಾಕ್‌ಲೈನ್ ನಿರಾಳರಾಗಿರುವುದು ಹೊಸತು.

ಹೌದು, ಚಿತ್ರ ಬಿಡುಗಡೆಗೂ ಮೊದಲು ಅವರು ತಾನು ಹೂಡಿದ ಹಣವನ್ನು ವಾಪಸ್ ಪಡೆದಿದ್ದಾರೆ. 'ಸೂಪರ್' ಚಿತ್ರದ ಕನ್ನಡ ಆವೃತ್ತಿಯ ಬಹುತೇಕ ವಿತರಣೆಯನ್ನು ಮಾಡಿದ್ದಾರೆ. ಸುಮಾರು 10 ಕೋಟಿ ರೂಪಾಯಿಗಳನ್ನು ಈ ಚಿತ್ರಕ್ಕಾಗಿ ಹಾಕಲಾಗಿತ್ತು.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳ ಹಕ್ಕುಗಳನ್ನು ಬರೋಬ್ಬರಿ 4.5 ಕೋಟಿ ರೂಪಾಯಿಗಳಿಗೆ ಪಿವಿಎಲ್ ವಿತರಣಾ ಸಮೂಹವು ನಿರ್ಮಾಪಕರಿಂದ ಖರೀದಿಸಿದೆ.

ಮೈಸೂರು ವಲಯದ ಹಕ್ಕುಗಳು 1.3 ಕೋಟಿ ರೂಪಾಯಿಗಳಿಗೆ ನವೀನ್ ಮನು ಗಂಗಾಧರ್, ಚಿತ್ರದುರ್ಗ, ಬಳ್ಳಾರಿ ಮತ್ತು ದಾವಣಗೆರೆಗಳಲ್ಲಿನ ವಿತರಣೆಯನ್ನು 81 ಲಕ್ಷ ರೂಪಾಯಿಗಳಿಗೆ ಹೊಸ ವಿತರಣೆದಾರರೊಬ್ಬರು ಪಡೆದುಕೊಂಡಿದ್ದಾರೆ. ಉಳಿದಿರುವ ಇನ್ನಿತರ ವಿತರಣೆ ಕೂಡ ನಡೆಯುತ್ತಿದೆ.

ಆಡಿಯೋ ಹಕ್ಕುಗಳನ್ನು ಮಧು ಬಂಗಾರಪ್ಪನವರ 'ಆಕಾಶ್ ಆಡಿಯೋ' ಸಂಸ್ಥೆಗೆ 1.3 ಕೋಟಿ ರೂಪಾಯಿಗಳಿಗೆ ರಾಕ್‌ಲೈನ್ ಮಾರಾಟ ಮಾಡಿದ್ದರು. ಈ ನಡುವೆ ಸ್ಯಾಟಲೈಟ್ ಹಕ್ಕುಗಳು ಕೂಡ ಹತ್ತಿರ ಹತ್ತಿರ 2 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ ಎಂದು ಮೂಲಗಳು ಹೇಳಿವೆ.
webdunia
PR

ತಮಿಳು ಮತ್ತು ತೆಲುಗು ಆವೃತ್ತಿಗಳಿಂದ ಕನಿಷ್ಠ 3 ಕೋಟಿ ರೂಪಾಯಿಗಳ ಆದಾಯ ನಿರೀಕ್ಷೆಯಿದೆ. ಈ ಎರಡೂ ಆವೃತ್ತಿಗಳು ಕನ್ನಡ ಬಿಡುಗಡೆಯ ನಂತರ ಬಿಡುಗಡೆಯಾಗಲಿವೆ.

ಉಪ್ಪಿ ರಾಜಕೀಯಕ್ಕೆ ಬರಲಿದ್ದಾರಾ?
ಕರ್ನಾಟಕದ ರಾಜಕೀಯ ಗಬ್ಬೆದ್ದು ಹೋಗಿರುವ ಹೊತ್ತಿನಲ್ಲಿ ಉಪೇಂದ್ರ ರಾಜಕೀಯಕ್ಕೆ ಬರಲಿದ್ದಾರೆಯೇ? ಇಂತಹ ಒಂದು ಸುದ್ದಿ ಬುಧವಾರ ಬೆಂಗಳೂರಿನಲ್ಲಿ ಹರಿದಾಡುತ್ತಿತ್ತು. ಇದನ್ನು ಸ್ವತಃ ಉಪ್ಪಿಯಲ್ಲಿ ಕೇಳಿದರೆ, ನಿರಾಕರಿಸದೆ ಕುತೂಹಲ ಮೂಡಿಸಿದ್ದಾರೆ.

ಹರಿದಾಡುತ್ತಿರುವ ರಾಜಕೀಯ ಸುದ್ದಿ ಬಗ್ಗೆ 'ಸುವರ್ಣ ನ್ಯೂಸ್ 24x7' ಮಾತನಾಡಿಸಿದಾಗ, 'ಈಗಿನ ರಾಜಕೀಯ ರೇಜಿಗೆ ಹುಟ್ಟಿಸಿರುವುದು ಹೌದು. ನಾನು ಏನಾದರೂ ಮಾಡಬೇಕು ಎಂಬ ಭಾವನೆ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯಲ್ಲಿ ಹುಟ್ಟುವಂತಹ ಪರಿಸ್ಥಿತಿಯಿದು. ಹಾಗಾಗಿ ನಾನು ಏನಾದರೂ ಮಾಡಬಹುದೇ ಎಂದು ಯೋಚಿಸುತ್ತಿದ್ದೇನೆ' ಎಂದರು.

ಯಾವುದೇ ಪಕ್ಷ ಅಥವಾ ಯಾವ ರೀತಿಯಲ್ಲಿ ಎಂಟ್ರಿಯಾಗುವುದು ಮುಂತಾದ ಬಗ್ಗೆ ಮಾತನಾಡುವುದನ್ನು ಬಿಟ್ಟು ತನ್ನ ಎಂದಿನ ಶೈಲಿಯಲ್ಲಿ ತತ್ವಜ್ಞಾನಿಯಂತೆ ಮಾತನಾಡಿದ ಉಪ್ಪಿ, 'ರಾಜಕೀಯದಲ್ಲಿ ಪ್ರಾಮಾಣಿಕರು ಕಡಿಮೆಯಾಗುತ್ತಿದ್ದಾರೆ. ಪ್ರತಿಯೊಬ್ಬರೂ ಗಾಂಧಿ, ನೆಹರೂ, ಸುಭಾಷ್ ಚಂದ್ರ ಬೋಸ್ ಬೇಕೆಂದು ಬಯಸುತ್ತಾರೆ. ಆದರೆ ಅವರು ಪಕ್ಕದ ಮನೆಯಲ್ಲಿ ಹುಟ್ಟಲಿ ಎಂದು ಬಯಸುತ್ತಾರೆಯೇ ಹೊರತು, ತಾನೇ ಅಂತಹ ವ್ಯಕ್ತಿತ್ವವನ್ನು ಹೊಂದಬೇಕೆಂದು ಯಾರೂ ಇಚ್ಛಿಸುವುದಿಲ್ಲ. ನಮ್ಮ ವ್ಯವಸ್ಥೆ ಬದಲಾವಣೆಯಾಗಬೇಕು' ಎಂದು ಏನೇನೋ ಮಾತನಾಡಿದರು.

ಕೆಲ ವರ್ಷಗಳ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಬಿಜೆಪಿಯೇ ಹಗರಣಗಳ ಕೊಚ್ಚೆಯಲ್ಲಿದೆ. ಹಾಗಾಗಿ ಅವರ ಆಯ್ಕೆ ಯಾವುದು ಎನ್ನುವುದು ಕುತೂಹಲ ಹುಟ್ಟಿಸಿದೆ.

ಶೀಘ್ರದಲ್ಲೇ ಇವೆಲ್ಲವನ್ನೂ ಪ್ರಕಟಿಸುವುದಾಗಿ ಅವರು ರೈಲು ಹತ್ತಿಸಿದ್ದಾರೆ.

Share this Story:

Follow Webdunia kannada