ಕೊಚ್ಚಿ: ಮಲಯಾಳಂ ಸಿನಿಮಾದ ಇಬ್ಬರು ಯುವ ಪ್ರತಿಭಾವಂತ ನಟರಿಗೆ ನಿರ್ಮಾಪಕರ ಸಂಘ ನಿಷೇಧ ಹೇರಿದೆ. ಇದಕ್ಕೆ ಕಾರಣವೂ ಗಂಭೀರವಾಗಿದೆ.
ಇತ್ತೀಚೆಗಷ್ಟೇ ಜನಪ್ರಿಯರಾಗುತ್ತಿರುವ ನಟರಾದ ಶ್ರೀನಾಥ್ ಬಾಸಿ ಮತ್ತು ಶೇನ್ ನಿಗಮ್ ಎನ್ನುವ ಇಬ್ಬರು ಕಲಾವಿದರಿಗೆ ನಿಷೇಧ ಹೇರಲಾಗಿದೆ. ಇದಕ್ಕೆ ಕಾರಣ ಇಬ್ಬರೂ ಚಿತ್ರೀಕರಣದ ಸೆಟ್ ನಲ್ಲಿ ಅಶಿಸ್ತು ತೋರುತ್ತಿರುವುದು.
ಚಿತ್ರದ ಸೆಟ್ ನಲ್ಲಿ ಮಾದಕ ವ್ಯಸನದ ಗುಂಗಿನಲ್ಲಿರುವ ನಟರು ಚಿತ್ರತಂಡಕ್ಕೆ ಕಿರಿ ಕಿರಿ ಮಾಡುತ್ತಿರುತ್ತಾರೆ. ಈ ಬಗ್ಗೆ ಅವರಿಗೆ ಪದೇ ಪದೇ ಎಚ್ಚರಿಕೆ ಕೊಟ್ಟರೂ ಪ್ರಯೋಜನವಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಇವರನ್ನು ಸಿನಿಮಾಗಳಲ್ಲಿ ಹಾಕಿಕೊಳ್ಳಬಾರದು ಎಂದು ನಿರ್ಮಾಪಕರ ಸಂಘ ಮತ್ತು ಫಿಲಂ ಎಂಪ್ಲಾಯಿ ಅಸೋಸಿಯೇಷನ್ ಆಫ್ ಕೇರಳ ಜಂಟಿಯಾಗಿ ತೀರ್ಮಾನಿಸಿದೆ. ಮಾದಕ ವ್ಯಸನ ಮಾಡುತ್ತಿರುವ ಇಂತಹ ಕಲಾವಿದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲು ಕೇರಳ ಸಿನಿಮಾ ಅಸೋಸಿಯೇಷನ್ ಅಮ್ಮ ತೀರ್ಮಾನಿಸಿದೆ.