ಬೆಂಗಳೂರು: ದುಬೈನಿಂದ 14 ಕೆ.ಜಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ಸೆರೆಯಾಗಿರುವ ನಟಿ ರನ್ಯಾ ನಿಜಕ್ಕೂ ಯಾರು ಇಲ್ಲಿದೆ ನೋಡಿ ವಿವರ.
ಪದೇ ಪದೇ ದುಬೈಗೆ ಹೋಗುತ್ತಿದ್ದ ರಮ್ಯಾ ಈ ಬಾರಿ ಬೆಂಗಳೂರು ಏರ್ ಪೋರ್ಟ್ ನಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರ ಮನೆಯಲ್ಲೂ ಅಕ್ರಮವಾಗಿ ಸಾಗಿಸಿ ತಂದ ಚಿನ್ನದ ಪೆಟ್ಟಿಗೆಯೇ ಸಿಕ್ಕಿದೆ ಎಂಬ ಮಾಹಿತಿಯಿದೆ.
ಇದೀಗ ನಟಿ ರನ್ಯಾರನ್ನು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದೀಗ ಅವರನ್ನು ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ದುಬೈ ಮೂಲದ ವ್ಯಕ್ತಿ ಜೊತೆ ರನ್ಯಾ ಹವಾಲಾ ದಂಧೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ತಿಳಿದು ಅಧಿಕಾರಿಗಳು ಆಕೆಯನ್ನು ಬಂಧಿಸಿದ್ದಾರೆ. 31 ವರ್ಷದ ನಟಿ ರನ್ಯಾ ರಾವ್ ಮೂಲತಃ ಚಿಕ್ಕಮಗಳೂರಿನವರು. ಸಿನಿಮಾಗಳಲ್ಲಿ ಹೆಚ್ಚು ಹೆಸರು ಮಾಡಿಲ್ಲ.ಮಾಡೆಲ್ ಆಗಿ ಬಣ್ಣದ ಲೋಕಕ್ಕೆ ಬಂದವರು. 2014 ರಲ್ಲಿ ಕಿಚ್ಚ ಸುದೀಪ್ ನಟನೆಯ ಮಾಣಿಕ್ಯ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಪಡೆದರು.
ಬಳಿಕ ತಮಿಳು ಸಿನಿಮಾದಲ್ಲೂ ನಟಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ಪಟಾಕಿ ಸಿನಿಮಾದಲ್ಲೂ ಪಾತ್ರ ಮಾಡಿದ್ದಾರೆ. ಸಿನಿಮಾಗಳಲ್ಲಿ ಹೆಚ್ಚು ಪಾತ್ರ ಮಾಡದೇ ಇದ್ದರೂ ನಂದವಾಣಿ ಮಾನ್ಸನ್ ನಲ್ಲಿ ಐಷಾರಾಮಿ ಫ್ಲ್ಯಾಟ್ ನಲ್ಲಿ ವಾಸ ಮಾಡುತ್ತಿದ್ದರು. ಇದಕ್ಕೆ ಸುಮಾರು 4.5 ಲಕ್ಷ ಬಾಡಿಗೆ ಕಟ್ಟುತ್ತಿದ್ದರು ಎನ್ನಲಾಗಿದೆ. ಇದೇ ಮನೆಯಿಂದ ಈಗ ಕೋಟಿ ಕೋಟಿ ಚಿನ್ನವನ್ನೂ ವಶಪಡಿಸಿಕೊಳ್ಳಲಾಗಿದೆ. ಇದೀಗ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ತಗ್ಲಾಕಿಕೊಂಡಿದ್ದಾರೆ.