ಬೆಂಗಳೂರು: ಈಗ ಎಲ್ಲೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್-ಇಂದ್ರಜಿತ್, ಉಮಾಪತಿ ಗೌಡ ನಡುವಿನ ಮಾತಿನ ವಾರ್ ಸದ್ದು ಮಾಡುತ್ತಿದೆ. ಇವರ ವೈಮನಸ್ಯ ಸರಿ ಮಾಡಲು ಚಿತ್ರರಂಗದ ಹಿರಿಯರು ಮನಸ್ಸು ಮಾಡಬೇಕು ಎಂಬ ಸಲಹೆಗಳೂ ಕೇಳಿಬರುತ್ತಿವೆ. ಅದರ ನಡುವೆ ಹಿಂದೊಮ್ಮೆ ಕನ್ನಡದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂದು ರವಿಚಂದ್ರನ್ ವಿರುದ್ಧ ಉಂಟಾಗಿದ್ದ ಆಕ್ರೋಶವನ್ನು ಡಾ. ರಾಜ್ ಕುಮಾರ್ ಬಗೆಹರಿಸಿದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮ್ಮ ಆರಂಭದ ದಿನಗಳಲ್ಲಿ ರವಿಚಂದ್ರನ್ ಕನ್ನಡದ ಬಗ್ಗೆ ತಪ್ಪಾಗಿ ಮಾತನಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಇದರಿಂದ ಅವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಡಾ. ರಾಜ್ ಬಹಿರಂಗ ಪತ್ರ ಬರೆದು, ಸಮಸ್ಯೆ ಬಗೆಹರಿಸಿದ್ದರು. ಇದು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅಂದಿನ ಪತ್ರಿಕಾ ತುಣುಕು ಈಗ ವೈರಲ್ ಆಗಿದೆ.
ಕನ್ನಡ ಸಿನಿಮಾ ರಂಗಕ್ಕೆ, ಕಲೆಗೆ ಸೇವೆ ಸಲ್ಲಿಸುತ್ತಿರುವ ವೀರಸ್ವಾಮಿ ಪುತ್ರರಾದ ರವಿಚಂದ್ರನ್ ಕನ್ನಡಕ್ಕೆ ಅವಮಾನ ಮಾಡಿರುವ ಸಾಧ‍್ಯತೆ ಕಡಿಮೆ. ಹಾಗಿದ್ದರೂ ಒಂದು ವೇಳೆ ಮಾಡಿದ್ದಲ್ಲಿ ಅವರ ಪರವಾಗಿ ಕ್ಷಮೆ ಕೋರುತ್ತೇವೆ. ಸಹೃದಯರಾದ ಕನ್ನಡಿಗರು ಅವರನ್ನು ಕ್ಷಮಿಸಿ ಎಂದು ಪತ್ರದಲ್ಲಿ ಡಾ.ರಾಜ್ ಕೋರಿದ್ದರು. ಇಂದು ಇಂತಹ ನಾಯಕನ ಅಗತ್ಯ ಚಿತ್ರರಂಗಕ್ಕಿದೆ ಎಂದು ಈ ಪತ್ರ ನೋಡಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.