ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ರೆಡಿಯಾಗಿದ್ದಾರೆ. ಇದರಿಂದಾಗಿ ದರ್ಶನ್ ಗೆ ಈಗ ಢವ ಢವ ಶುರುವಾಗಿದೆ.
ಇದೀಗ ಈ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆಗಿದ್ದರೆ ದರ್ಶನ್ ಎ2 ಆಗಿದ್ದಾರೆ. ಇನ್ನುಳಿದ ಆರೋಪಿಗಳಿಗೆ ಅವರವರ ಸಹಭಾಗಿತ್ವಕ್ಕೆ ತಕ್ಕಂತೆ ಆರೋಪಿ ಸಂಖ್ಯೆ ನೀಡಲಾಗಿದೆ. ಆದರೆ ಇದೀಗ ಪೊಲೀಸರು ಸಮಗ್ರ ತನಿಖೆ ನಡೆಸಿದ ನಂತರ ಆರೋಪಿಗಳ ಸಂಖ್ಯೆ ಬದಲಾಗುವುದು ಖಂಡಿತ.
ಮೂಲಗಳ ಪ್ರಕಾರ ಈ ಕೊಲೆಯ ಸಂಚು ರೂಪಿಸಿದ ಪ್ರಮುಖ ರೂವಾರಿ ದರ್ಶನ್ ಎಂದು ಕಂಡುಬಂದಿದ್ದು, ಅವರೇ ಎ1 ಆಗುವ ಸಾಧ್ಯತೆಯಿದೆ. ದರ್ಶನ್ ಎ1 ಆದರೆ ಅವರ ಮುಂದಿನ ಗತಿಯೇನು ಎಂಬ ಪ್ರಶ್ನೆ ಮೂಡಿದೆ. ಎ1 ಆರೋಪಿಯಾದರೆ ಅವರಿಗೆ ಜಾಮೀನು ಸಿಗುವುದೂ ಕಷ್ಟವಾಗಲಿದೆ.
ಒಂದು ವೇಳೆ ಜಾಮೀನು ನೀಡಿದರೂ ಮುಂದೆ ಶಿಕ್ಷೆ ನೀಡುವ ಸಂದರ್ಭದಲ್ಲಿ ಅವರಿಗೆ ಗರಿಷ್ಠ ಶಿಕ್ಷೆಯಾಗಬಹುದಾಗಿದೆ. ಆದರೆ ಸದ್ಯಕ್ಕೆ ಪೊಲೀಸರು ಎ1 ಆರೋಪಿ ಯಾರಾಗಲಿದ್ದಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ವಿಚಾರದಲ್ಲಿ ತಾನು ತಲೆ ಹಾಕುವುದಿಲ್ಲ ಎಂದು ಪೊಲೀಸ್ ಕಮಿಷನರ್ ಬಿ ದಯಾನಂದ್ ಈಗಾಗಲೇ ಹೇಳಿದ್ದಾರೆ. ಆದರೆ ದರ್ಶನ್ ವಿರುದ್ಧ ಸಿಕ್ಕಿರುವ ಸಾಕ್ಷ್ಯಗಳನ್ನು ಗಮನಿಸಿದರೆ ಅವರೇ ಎ1 ಆಗುವ ದಟ್ಟ ಸಾಧ್ಯತೆಗಳಿವೆ. ಚಾರ್ಜ್ ಶೀಟ್ ಸಲ್ಲಿಕೆ ಬಳಿಕವಷ್ಟೇ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಆದರೆ ಅವರು ಎ1 ಆದರೆ ಅವರಿಗೆ ಜಾಮೀನು ಸಿಗುವುದು ಕಷ್ಟವಾಗಲಿದೆ.