ಬೆಂಗಳೂರು: ಗಾಂಧೀಜಿಯವರ ಹತ್ಯೆಯ ಬಳಿಕ ಏನೇನಾಯ್ತು ಎಂದು ನಮ್ಮ ಇತಿಹಾಸಗಳಲ್ಲಿ ಅನೇಕ ವಿವರಣೆಗಳಿವೆ. ಈಗ ಅದನ್ನೇ ರಂಗಭೂಮಿ ಮೂಲಕ ಜನರ ಮುಂದೆ ತೆರೆದಿಡಲು ಗೋಡ್ಸೆ ಎಂಬ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ.
ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಿರ್ದೇಶಕ, ಬರಹಗಾರ ರಾಜು ಭಂಡಾರಿ ರಚನೆಯಲ್ಲಿ ಮೂಡಿಬಂದಿರುವ ಗೋಡ್ಸೆ ಎಂಬ ನಾಟಕವು ಇದೇ ಏಪ್ರಿಲ್ 10 ರಂದು ಸಂಜೆ 6.15 ಕ್ಕೆ ಕಲಾಗ್ರಾಮ ಮಲ್ಲತಹಳ್ಳಿಯಲ್ಲಿ ಪ್ರದರ್ಶನಗೊಳ್ಳಲಿದೆ. ಇದು ಮೊದಲ ಪ್ರದರ್ಶನ ಎಂಬುದು ವಿಶೇಷ.
ರಾಜು ಭಂಡಾರಿ ರಚನೆ ಮಾಡಿರುವ ನಾಟಕವನ್ನು ಹುತ್ತೇಶ್ ಬಿ.ಇ. ರಂಗ ನಿರ್ದೇಶನ ಮಾಡಿದ್ದಾರೆ. ಗೋಡ್ಸೆ ಎಂಬ ಹೆಸರು ಕೇಳಿದ ತಕ್ಷಣ ನಮಗೆ ಗಾಂಧೀಜಿ ಹತ್ಯೆಯ ಇತಿಹಾಸವೇ ಕಣ್ಣಮುಂದೆ ಬರುತ್ತದೆ. ಗಾಂಧೀಜಿಯವರನ್ನು ಹತ್ಯೆ ಮಾಡಿದ ಗೋಡ್ಸೆ ಹೆಸರಿನ ನಾಟಕಕ್ಕೆ ಒಂದು ಪ್ರೇಮ ಕಥೆ ಎಂಬ ಅಡಿಬರಹವನ್ನೂ ನೀಡಿರುವುದು ನಿಮ್ಮ ಕುತೂಹಲಕ್ಕೆ ಕಾರಣವಾಗಬಹುದು. ಹಾಗಿದ್ದರೆ ಈ ನಾಟಕದಲ್ಲಿ ಏನಿರುತ್ತದೆ ಎಂಬ ಕುತೂಹಲ ತಣಿಸಲು ನೀವು ನಾಟಕ ನೋಡಲೇಬೇಕು.
ಕಥೆಯ ಸಾರಾಂಶ:
1948 ರ ಜನವರಿ 30 ರಂದು ನಡೆದ ಗಾಂಧೀಜಿಯವರ ಹತ್ಯೆಯ ಘಟನೆಯ ಮಾರನೆಯ ದಿನದಿಂದ ಪ್ರಾರಂಭವಾಗುವ ಈ ಕತೆಯು ಗಾಂಧೀಜಿಯವರ ಹತ್ಯೆಯ ನಂತರ, ಪುಣೆಯಲ್ಲಿ ಈ ಹತ್ಯೆಗೆ ಯಾವುದೇ ರೀತಿ ಸಂಬಂಧವಿರದ ಒಂದು ಸಮುದಾಯದವರನ್ನು ಅನವಶ್ಯಕವಾಗಿ ಬಂಧಿಸಿ ಚಿತ್ರಹಿಂಸೆ ನೀಡುವ ಅಂದಿನ ಆಡಳಿತದ ಇನ್ನೊಂದು ಮುಖವನ್ನು ತೆರೆದಿಡುತ್ತದೆ. ಶಾಂತಿ ಪ್ರಿಯ ಗಾಂಧೀಜಿಯವರ ಅನುಯಾಯಿಗಳ ಹಿಂಸಾತ್ಮಕ ಕೃತ್ಯಗಳಿಗೆ ತುತ್ತಾಗಬೇಕಾದ ಅಸಹಾಯಕ ಸ್ಥಿತಿಯನ್ನು ತಲುಪಿದ "ಗೋಡ್ಸೆ" ಎಂಬ ಪರಿವಾರದವರ ಕತೆಯನ್ನು ಪ್ರೇಮ ಕಥಾನಕದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಮನರಂಜನೆಯ ಜೊತೆಗೆ ದೇಶಪ್ರೇಮದ ಚಿಂತನೆಯನ್ನು ಕೂಡ ಸಾರುವ ಪ್ರಯತ್ನ ಕೂಡ ಈ ನಾಟಕದಲ್ಲಿದೆ.
ನಾಟಕ ರಚನೆ : ರಾಜು ಭಂಡಾರಿ
ರಂಗ ನಿರ್ದೇಶನ : ಹುತ್ತೇಶ್ . ಬಿ. ಇ .
ದಿನಾಂಕ :10/04/2025
ಸಮಯ : ಸಂಜೆ 6:15
ಸ್ಥಳ : ಕಲಾಗ್ರಾಮ ಮಲ್ಲತಹಳ್ಳಿ
ಪ್ರವೇಶ ಉಚಿತವಿದೆ.