ಚೆನ್ನೈ: ಮದುವೆಯಾದ ಬಳಿಕ ನೇರವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಬಂದ ನವಜೋಡಿ ನಯನತಾರಾ-ವಿಘ್ನೇಶ್ ಇಲ್ಲದ ವಿವಾದವೊಂದನ್ನು ಮೈಮೇಲೆಳದುಕೊಂಡಿದ್ದಾರೆ.
ತಿರುಪತಿಯ ಹೊರಾಂಗಣದಲ್ಲಿ ನಯನತಾರಾ ಚಪ್ಪಲಿ ಧರಿಸಿ ಓಡಾಡಿದ ಫೋಟೋ ವೈರಲ್ ಆಗಿತ್ತು. ಇದು ವಿವಾದವಾಗುತ್ತಿದ್ದಂತೇ ವಿಘ್ನೇಶ್ ಶಿವನ್ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ಮತ್ತು ಕ್ಷಮೆ ಯಾಚಿಸಿದ್ದಾರೆ.
ತಿರುಪತಿಯಲ್ಲಿ ಮದುವೆಯಾಗಬೇಕೆಂಬ ನಮ್ಮ ಕನಸು ನನಸಾಗಲಿಲ್ಲ. ಹೀಗಾಗಿ ಮದುವೆ ಮಂಟಪದಿಂದ ನೇರವಾಗಿ ಬಾಲಾಜಿಯ ದರ್ಶನ ಪಡೆಯಲು ಬಂದೆವು. ಇಲ್ಲಿ ಸ್ವಾಮಿ ಕಲ್ಯಾಣಂ ನೋಡಿ ಬಳಿಕ ಫೋಟೋ ತೆಗೆಯಲು ಬಯಸಿದ್ದೆವು. ಆದರೆ ಜನಸಂದಣಿ ಇದ್ದಿದ್ದರಿಂದ ಸಾಧ‍್ಯವಾಗಲಿಲ್ಲ. ಮತ್ತೆ ಜನಸಂದಣಿ ಕಡಿಮೆಯಾದ ಬಳಿಕ ಮತ್ತೆ ಆವರಣಕ್ಕೆ ಬಂದು ಫೋಟೋ ತೆಗೆಯಲು ಬಂದೆವು. ಆಗ ಗಡಿಬಿಡಿಯಲ್ಲಿ ಚಪ್ಪಲಿ ತೆಗೆಯಲು ಮರೆತೆವು. ನಾವು ಆಗಾಗ ತಿರುಪತಿ ದೇವರ ಭಕ್ತರಾಗಿದ್ದು, ನಮ್ಮ ಮದುವೆ ಸುಸ್ರೂತ್ರವಾಗಿ ನಡೆಯಲಿ ಎಂದು ಕಳೆದ 30 ದಿನಗಳಲ್ಲಿ ಐದು ಬಾರಿ ದೇವಾಲಯಕ್ಕೆ ಬಂದಿದ್ದೇವೆ. ಹಾಗಿದ್ದರೂ ನಮ್ಮಿಂದ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಯಾಚಿಸುತ್ತೇವೆ ಎಂದು ವಿಘ್ನೇಶ್ ಸ್ಪಷ್ಟನೆ ನೀಡಿದ್ದಾರೆ.