ಶ್ರೀ ಸಾಯಿ ಭಗವಾನ್ ಕಂಬೈನ್ಸ್ ಬ್ಯಾನರಿನಡಿಯಲ್ಲಿ ಅನಿಲ್ ಎಚ್ ಅಂಬಿ ನಿರ್ಮಾಣ ಮಾಡಿರುವ ವೇಷಧಾರಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಈ ಚಿತ್ರ ಟ್ರೇಲರ್, ವಿಭಿನ್ನವಾದ ಪೋಸ್ಟರ್ಗಳ ಮೂಲಕ ಎಲ್ಲೆಡೆಯೂ ಸದ್ದು ಮಾಡಿದೆ.
ಇದೇನೋ ಹೊಸಾ ಬಗೆಯ ಕಥಾ ಹಂದರ ಹೊಂದಿರುವ ಚಿತ್ರವೆಂಬಂಥಾ ಭಾವನೆ ಪ್ರತೀ ಪ್ರೇಕ್ಷಕರಲ್ಲಿಯೂ ಚಿಗುರಿಕೊಂಡಿದೆ. ವರ್ಷಾಂತರಗಳ ಕಾಲ ಅದೇನೇ ಅಡೆತಡೆಗಳು ಎದುರಾದರೂ ಲೆಕ್ಕಿಸದೆ ಚಿತ್ರತಂಡ ವೇಷಧಾರಿಯನ್ನು ರೂಪಿಸಿದೆ. ಇದೆಲ್ಲದರಿಂದಾಗಿಯೇ ಸಾಕಷ್ಟು ವೈಶಿಷ್ಟ್ಯಗಳಿಂದ ಮೈ ಕೈ ತುಂಬಿಕೊಂಡಿರುವ ಸದರಿ ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಅವತರಿಸಲಿದ್ದಾನೆ.
ಶಿವಾನಂದ ಭೂಶಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಕಥಾ ವಸ್ತು ನಮ್ಮ ಸಮಾಜವನ್ನು ತಣ್ಣಗೆ ಕೊರೆಯುತ್ತಿರೋ ಗಂಭೀರವಾದ ವಿಚಾರಗಳನ್ನೊಳಗೊಂಡಿದೆ. ಆದರೆ ಅದನ್ನು ಭರ್ಜರಿ ಮನೋರಂಜನೆಯ ಹದವಾದ ಲೇಪನದೊಂದಿಗೇ ನಿರ್ದೇಶಕರು ನಿರೂಪಿಸಿದ್ದಾರೆ. ಈ ಸಂಗತಿ ಟ್ರೇಲರ್ ಮೂಲಕ ಸ್ಪಷ್ಟವಾಗಿಯೇ ಅನಾವರಣಗೊಂಡಿದೆ. ಅದರಲ್ಲಿನ ಕಾಮಿಡಿ ಝಲಕ್ಕುಗಳಿಗೆ ಪ್ರೇಕ್ಷಕರೆಲ್ಲ ಮುದಗೊಂಡಿದ್ದಾರೆ. ಟ್ರೇಲರ್ನಲ್ಲಿ ಕಾಣಿಸಿರುವ ಕಾಮಿಡಿ ಝಲಕ್ಕುಗಳನ್ನೇ ಮೀರಿಸುವಂಥಾ ಕಾಮಿಡಿ ಕಿಕ್ ಚಿತ್ರದುದ್ದಕ್ಕೂ ಕೈ ಹಿಡಿಯಲಿದೆ ಎಂಬ ಭರವಸೆ ಚಿತ್ರತಂಡದಲ್ಲಿದೆ.
ಈ ಚಿತ್ರದಲ್ಲಿ ಹಾಸ್ಯ ಕಲಾವಿದರ ದಂಡೇ ನೆರೆದಿದೆ. ಇತ್ತೀಚಿನ ದಿನಗಳ್ಲ್ಲಿ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದ ವೈಜ್ಯನಾಥ್ ಬಿರಾದಾರ್ ಇಲ್ಲಿ ಮುಖ್ಯ ಹಾಸ್ಯ ಕಲಾವಿದರಾಗಿ ಮಜವಾದ ಪಾತ್ರವನ್ನು ನಿರ್ವಹಿಸಿದ್ದಾರೆ. ಕುರಿ ರಂಗ, ಸೀರುಂಡೆ ರಘು, ಮಿಮಿಕ್ರಿ ಗೋಪಿ ಮುಂತಾದವರೆಲ್ಲ ಅಷ್ಟೇ ಮಜವಾದ ಪಾತ್ರಗಳಲ್ಲಿ ಹಾಸ್ಯದ ಹೊನಲು ಹರಿಸಲು ಅಣಿಗೊಂಡಿದ್ದಾರೆ. ಈ ಸಿನಿಮಾದಲ್ಲಿ ಕಾವಿಯ ಸುತ್ತಲಿನ ನಿಕಷಕ್ಕೊಡ್ಡುವಂಥಾ ವಿದ್ಯಮಾನಗಳನ್ನೇ ದೃಷ್ಯೀಕರಿಸಲಾಗಿದೆಯಂತೆ. ಅದು ಗಂಭೀರವಾಗದಂತೆ ನೋಡಿಕೊಳ್ಳಲು ಪ್ರತೀ ದೃಷ್ಯಾವಳಿಗಳಲ್ಲಿಯೂ ನಗೆಯ ಹೊನಲು ಹರಿಸಲು ಚಿತ್ರ ತಂಡ ಮುಂದಾಗಿದೆ.