Publish Date: Thu, 08 Feb 2024 (08:40 IST)
Updated Date: Thu, 08 Feb 2024 (08:43 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಟಾಕ್ಸಿಕ್ ಸಿನಿಮಾ ಬಗ್ಗೆ ಇದೇ ತಿಂಗಳ ಅಂತ್ಯಕ್ಕೆ ಹೊಸ ಅಪ್ ಡೇಟ್ ಸಿಗುವ ಸಾಧ‍್ಯತೆಯಿದೆ.
ಚಿತ್ರತಂಡ ಟಾಕ್ಸಿಕ್ ಸಿನಿಮಾ ಘೋಷಣೆ ಮಾಡಿ ಎರಡು ತಿಂಗಳಾಗುತ್ತಾ ಬಂದಿದೆ. ಆದರೆ ಇನ್ನೂ ಅಧಿಕೃತವಾಗಿ ಶೂಟಿಂಗ್ ಶುರು ಮಾಡಿಲ್ಲ. ಈಗಾಗಲೇ ಪಾತ್ರಗಳ ಆಯ್ಕೆ ನಡೆಯುತ್ತಿದೆ ಎಂಬ ಮಾಹಿತಿಯಿದೆ. ಯಶ್ ಈಗಾಗಲೇ ವಿದೇಶದಲ್ಲಿ ಬೀಡುಬಿಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ.
ಇತ್ತೀಚೆಗೆ ಅವರ ಹುಟ್ಟುಹಬ್ಬದಂದು ಟಾಕ್ಸಿಕ್ ಸಿನಿಮಾ ಸಲುವಾಗಿಯೇ ಮಲೇಷ್ಯಾದಲ್ಲಿದ್ದರು. ಆದರೆ ಅಭಿಮಾನಿಗಳ ಸಾವಿನ ಸುದ್ದಿ ತಿಳಿದು ಭಾರತಕ್ಕೆ ಬಂದಿದ್ದರು. ಇದೀಗ ಲೊಕೇಷನ್ ಆಯ್ಕೆ ಕೆಲಸಗಳೆಲ್ಲಾ ಮುಗಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಇದೇ ತಿಂಗಳ ಅಂತ್ಯಕ್ಕೆ ಟಾಕ್ಸಿಕ್ ಸಿನಿಮಾ ಮುಹೂರ್ತ ನಡೆದು ಶೂಟಿಂಗ್ ಆರಂಭವಾಗುವ ಸಾಧ‍್ಯತೆಯಿದೆ.
ಮೂಲಗಳ ಪ್ರಕಾರ ಟಾಕ್ಸಿಕ್ ಸಿನಿಮಾವನ್ನು ಶ್ರೀಲಂಕಾ, ಲಂಡನ್, ಮಲೇಷ್ಯಾ, ಗೋವಾದಲ್ಲಿ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ಈಗಾಗಲೇ ಯಶ್ ಮತ್ತು ಚಿತ್ರತಂಡ ಈ ಎಲ್ಲಾ ಸ್ಥಳಗಳಿಗೆ ತೆರಳಿ ಶೂಟಿಂಗ್ ಗೆ ತಯಾರಿ ಮಾಡಿಕೊಂಡು ಬಂದಿದೆ. ಹೀಗಾಗಿ ಟಾಕ್ಸಿಕ್ ದೊಡ್ಡ ಮಟ್ಟದಲ್ಲೇ ಲಾಂಚ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.