ಸಿನಿಮಾ ಸೋತಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಸ್ಯಾಂಡಲ್ ವುಡ್ ನಿರ್ದೇಶಕ ಅಡ್ಡದಾರಿ ತುಳಿಯಲು ಹೋಗಿ ಈಗ ಪೊಲೀಸರ ಅತಿಥಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
2016ರಲ್ಲಿ ಮಧುರ ಸ್ವಪ್ನ ಎಂಬ ಚಿತ್ರ ನಿರ್ದೇಶಿಸಿದ್ದ ಕರಮಲ ಬಾಲರವೀಂದ್ರನಾಥ್ ಬ್ಯಾಂಕ್ ಗೆ 42 ಲಕ್ಷ ರೂ. ವಂಚಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಲ್ಲದೇ ವಚಂನೆಗೆ ಸಹಾಯ ಮಾಡಿದ ಚಿನ್ನದ ಕಸೂತಿ ಕೆಲಸ ಮಾಡುವ ಶಿವಕುಮಾರ್ ಈ ಹಣ ಮಾಡಲು ಅನುಸರಿಸಿದ ಮಾರ್ಗ ನೋಡಿ ಪೊಲೀಸರೇ ದಂಗಾಗಿದ್ದಾರೆ.
ಖಾಸಗಿ ಬ್ಯಾಂಕ್ ಗೆ ಚಿನ್ನ ಅಡವಿಟ್ಟು 42.91 ಲಕ್ಷ ರೂ. ಸಾಲ ಪಡೆದಿದ್ದ ಕರಮಲ ಬಾಲ ರವೀಂದ್ರನಾಥ್, ಬಡ್ಡಿ ಕೂಡ ಕಟ್ಟದೇ ಆರಾಮಾಗಿ ಇದ್ದರು. ಬಡ್ಡಿ ಕಟ್ಟದೇ ಇರುವುದಕ್ಕೆ ಬ್ಯಾಂಕ್ ನೋಟಿಸ್ ಕಳಿಸಿದರೂ ಪ್ರತಿಕ್ರಿಯಿಸಿರಲಿಲ್ಲ. ಕೊನೆಗೆ ಚಿನ್ನದ ಆಭರಣ ಹರಾಜು ಹಾಕುವುದಾಗಿ ನೋಟಿಸ್ ಕಳುಹಿಸಿದರೂ ನಿರ್ದೇಶಕ ಕ್ಯಾರೇ ಅನ್ನದೇ ಇದ್ದಿದ್ದು ಅನುಮಾನ ಮೂಡಿಸಿತು.
ಬ್ಯಾಂಕ್ ಅಧಿಕಾರಿಗಳು ಚಿನ್ನಾಭರಣ ಪರಿಶೀಲಿಸಿದಾಗ ಮೇಲೆ ಚಿನ್ನ ಇದ್ದರೂ ಒಳಗೆ ಬೇರೆ ಲೋಹ ತುಂಬಿತ್ತು. ಕೂಡಲೇ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ರಾಜಾಜಿನಗರದಲ್ಲಿ ವಾಸವಾಗಿದ್ದ ನಿರ್ದೇಶಕರನ್ನು ಬಂಧಿಸಿದ್ದಾರೆ. ಆರೋಪಿ ಇದೇ ರೀತಿ ಹಲವು ಬ್ಯಾಂಕ್ ಗಳಿಗೆ ವಂಚಿಸಿರುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ವಿಚಾರಣೆ ನಡೆಸಿದ್ದಾರೆ.