ಬೆಂಗಳೂರು: ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಆತನ ಆಗಿನ ಗೆಳತಿ ರಿಯಾ ಚಕ್ರವರ್ತಿ ಬಳಿ ಮಾಧ್ಯಮಗಳು ಕ್ಷಮೆಯಾಚಿಸಬೇಕೆಂದು ಬಾಲಿವುಡ್ ನಟಿ ದಿಯಾ ಮಿರ್ಜಾ ಆಗ್ರಹಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಮಾಧ್ಯಮಗಳು ರಿಯಾ ಚಕ್ರವರ್ತಿಗೆ ತೀವ್ರ ನೋವು ಮತ್ತು ಕಿರುಕುಳ ನೀಡಿದೆ ಎಂದು ದಿಯಾ ಮಿರ್ಜಾ ಅವರು ಬರೆದುಕೊಂಡಿದ್ದಾರೆ. ಸುಶಾಂತ್ ಸಾವು ಪ್ರಕರಣದಲ್ಲಿ ರಿಯಾ ಕೈವಾಡವಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎರಡು ಪ್ರತ್ಯೇಕ ಮುಕ್ತಾಯ ವರದಿಗಳನ್ನು ಸಲ್ಲಿಸಿದೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ಆರೋಪಿಸಿ ನಟನ ತಂದೆ ಕೆಕೆ ಸಿಂಗ್ ನೀಡಿದ ದೂರು ಮತ್ತು ಸುಶಾಂತ್ ಗೆಳತಿ, ನಟಿ ರಿಯಾ ಚಕ್ರವರ್ತಿ ಅವರು ಸುಶಾಂತ್ ಸಹೋದರಿಯರ ವಿರುದ್ಧ ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಸಿಬಿಐ ಶನಿವಾರ ಈ ವರದಿ ಸಲ್ಲಿಸಿದೆ.
ಆಗಸ್ಟ್ 2020 ರಲ್ಲಿ ಬಿಹಾರ ಪೊಲೀಸರಿಂದ ಸಿಬಿಐ ಈ ಪ್ರಕರಣವನ್ನು ವಹಿಸಿಕೊಂಡಿತ್ತು. ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ತನಿಖೆ ನಡೆಸಿದ ನಂತರ, ಸುಶಾಂತ್ ರಜಪೂತ್ ಅವರನ್ನು ಆತ್ಮಹತ್ಯೆಗೆ ತಳ್ಳಿದವರ ಬಗ್ಗೆ ಯಾವುದೇ ಪುರಾವೆಗಳು ಸಂಸ್ಥೆಗೆ ಸಿಗಲಿಲ್ಲ ಮತ್ತು ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಿಯಾ ಚಕ್ರವರ್ತಿ, ಅವರ ಪೋಷಕರು ಮತ್ತು ಸಹೋದರ ಸೇರಿದಂತೆ ಪ್ರಕರಣದಲ್ಲಿ ದಾಖಲಾಗಿರುವ ಎರಡು ಎಫ್‌ಐಆರ್‌ಗಳಲ್ಲಿ ಹೆಸರಿಸಲಾದ ಎಲ್ಲರನ್ನೂ ಸಿಬಿಐ ಖುಲಾಸೆಗೊಳಿಸಿದೆ ಎಂದು ಅವರು ಹೇಳಿದರು.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ವಿಧಿವಿಜ್ಞಾನ ತಂಡವು ಸುಶಾಂತ್ ರಜಪೂತ್ ಅವರನ್ನು ಕೊಲೆ ಮಾಡಿಲ್ಲ ಮತ್ತು ಇದು ಆತ್ಮಹತ್ಯೆಯಿಂದ ಸಂಭವಿಸಿದ ಸಾವು ಎಂದು ಹೇಳಿತ್ತು.