ಮುಂಬೈ: 2020ರಲ್ಲಿ ನಡೆದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸಿರುವ ಸಿಬಿಐ ಅಧಿಕಾರಿಗಳು ನಾಲ್ಕೂವರೆ ವರ್ಷಗಳ ಬಳಿಕ ಅಂತಿಮ ವರದಿವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
2020ರ ಜೂನ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಫ್ಲಾಟ್‌ನಲ್ಲಿ 34 ವರ್ಷದ ಸುಶಾಂತ್ ಸಿಂಗ್ ರಜಪೂತ್ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಬಳಿಕ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು.
ಸುಶಾಂತ್ ಆಪ್ತೆಯಾಗಿದ್ದ ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಕುಟುಂಬದ ಪ್ರಚೋದನೆಯಿಂದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆತನ ತಂದೆ ಆರೋಪಿಸಿ ದೂರು ನೀಡಿದ್ದರು. ರಿಯಾ ಚಕ್ರವರ್ತಿ ಪ್ರತಿದೂರು ದಾಖಲಿಸಿದ್ದರು.
ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ತನಿಖೆ ನಡೆಸಿದ ಸಿಬಿಐ ತಂಡವು ಸುಶಾಂತ್ ರಜಪೂತ್ ಆತ್ಮಹತ್ಯೆಗೆ ಯಾರೂ ಪ್ರಚೋದನೆ ನೀಡಿಲ್ಲ. ಪ್ರಚೋದಿಸಿರುದಕ್ಕೆ ಯಾವುದೇ ಪುರಾವೆಗಳು ಸಂಸ್ಥೆಗೆ ಸಿಗಲಿಲ್ಲ ಎಂದು ವರದಿಯಲ್ಲಿ ತಿಳಿಸಿದೆ. ಈ ಮೂಲಕ ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.