ಬೆಂಗಳೂರು: ಇನ್ ಸ್ಟಾಗ್ರಾಂನಲ್ಲಿ ನಟ ದರ್ಶನ್ ತಮ್ಮನ್ನು ಅನ್ ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಅಂಬರೀಶ್ ಮಾಡಿರುವ ಪೋಸ್ಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ಇಂತಹವರಿಗೆ ಆಸ್ಕರ್ ಅವಾರ್ಡ್ ಕೊಡಬೇಕು ಎಂದು ಅವರು ಸಾಲುಗಳೊಂದನ್ನು ಬರೆದುಕೊಂಡಿದ್ದಾರೆ.
ನಿನ್ನೆಯಷ್ಟೇ ನಟ ದರ್ಶನ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಿಂದ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಸೇರಿದಂತೆ ಎಲ್ಲಾ ಆರು ಫಾಲೋವರ್ ಗಳನ್ನು ಅನ್ ಫಾಲೋ ಮಾಡಿದ್ದು ಭಾರೀ ಸುದ್ದಿಯಾಗಿದೆ. ಸುಮಲತಾ ಮತ್ತು ದರ್ಶನ್ ನಡುವೆ ಬಿರುಕು ಮೂಡಿದೆಯಾ ಎಂಬ ಸುದ್ದಿ ಹಬ್ಬಿದೆ.
ಇದರ ನಡುವೆ ಸುಮಲತಾ ಇಂದು ಇನ್ ಸ್ಟಾಗ್ರಾಂನಲ್ಲಿ ಒಂದು ಸಾಲು ಬರೆದುಕೊಂಡಿದ್ದಾರೆ. ಇದರಲ್ಲಿ ಆಸ್ಕರ್ ಅವಾರ್ಡ್ ಇವರಿಗೆ ಹೋಗುತ್ತದೆ. ಯಾರೆಂದರೆ ಸತ್ಯ ಮರೆ ಮಾಚುತ್ತಾರೆ, ಯಾರು ಇನ್ನೊಬ್ಬರಿಗೆ ನೋವು ಕೊಡುತ್ತಾರೆ, ಆರೋಪಗಳನ್ನು ಇನ್ನೊಬ್ಬರ ಮೇಲೆ ಹೊರಿಸುತ್ತಾರೆ, ಅಂತಹವರು ತಮ್ಮನ್ನು ತಾವು ಹೀರೋ ಅಂದುಕೊಳ್ಳುತ್ತಾರೆ ಎಂದು ಸುಮಲತಾ ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಮತ್ತಷ್ಟು ಹುಬ್ಬೇರುವಂತೆ ಮಾಡಿದೆ. ಈ ಸಾಲುಗಳನ್ನು ಸುಮಲತಾ ತಮ್ಮ ಮತ್ತು ದರ್ಶನ್ ನಡುವೆ ಭಿನ್ನಾಭಿಪ್ರಾಯ ಹುಟ್ಟಿದೆ ಎಂದು ಸುದ್ದಿ ಮಾಡಿರುವ ಮಾಧ್ಯಮಗಳನ್ನು ಉದ್ದೇಶಿಸಿ ಮಾಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.