ಬೆಂಗಳೂರು: ನನ್ನ ಈ ವಯಸ್ಸಿನಲ್ಲಿ ನನ್ನ ಮಗನ ವಯಸ್ಸಿನವನು ಬೆದರಿಸುತ್ತಿದ್ದರೆ ಸುಮ್ಮನೆ ಕೇಳುತ್ತಾ ಕೂರಬೇಕೇ ಎಂದು ಕನ್ನಡ ವಿವಾದದ ಬಗ್ಗೆ ಸುದೀರ್ಘ ಪತ್ರ ಬರೆದು ಸೋನು ನಿಗಂ ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಕನ್ನಡ ಎನ್ನುವುದರಿಂದಲೇ ಪಹಲ್ಗಾಮ್ ನಲ್ಲಿ ದಾಳಿಯಾಯಿತು ಎಂದಿದ್ದ ಸೋನು ನಿಗಂರನ್ನು ಸ್ಯಾಂಡಲ್ ವುಡ್ ನಿಂದ ನಿಷೇಧ ಹೇರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆದೇಶ ಹೊರಡಿಸಿದೆ.
ಇದರ ಬಗ್ಗೆ ಈಗ ಸೋನು ನಿಗಂ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪತ್ರ ಬರೆದು ಪ್ರತಿಕ್ರಿಯೆ ನೀಡಿದ್ದಾರೆ. ನಮಸ್ಕಾರ, ನಾನು ಯಾವುದೇ ರಾಜ್ಯ, ಪ್ರದೇಶದಲ್ಲಿರುವಾಗ ಅಲ್ಲಿನ ಸಂಗೀತ, ತಂತ್ರಜ್ಞರು, ಭಾಷೆ, ಸಂಸ್ಕೃತಿಗೆ ಗೌರವ ಕೊಡುತ್ತೇನೆ. ಅದು ಕರ್ನಾಟಕ ಎಂದು ಮಾತ್ರವಲ್ಲ, ಯಾವುದೇ ಸ್ಥಳವಾಗಿದ್ದರೂ ಕೂಡಾ. ಕನ್ನಡ ಹಾಡುಗಳ ಬಗ್ಗೆ, ಕನ್ನಡದ ಬಗ್ಗೆ ನನಗಿರುವ ಗೌರವದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳಿವೆ.
ಆದರೆ ನನ್ನ ಮಗನ ವಯಸ್ಸಿನ ವ್ಯಕ್ತಿ ನನ್ನನ್ನು ಬೆದರಿಸುತ್ತಿದ್ದರೆ ಅದನ್ನು ನೋಡುತ್ತಾ ಕೂರುವ ವಯಸ್ಸಲ್ಲ. ನನಗೀಗ 51 ವರ್ಷ. ಜೀವನದ ಇನ್ನೊಂದು ಅರ್ಧಕ್ಕೆ ಬಂದಿದ್ದೇನೆ. ಸಾವಿರಾರು ಜನರ ಮುಂದೆ ನನ್ನ ಮಗನ ವಯಸ್ಸಿನ ಯುವಕ ನನಗೆ ಬೆದರಿಸುವಾಗ ಅದರಲ್ಲೂ ಕನ್ನಡ ನನ್ನ ಎರಡನೇ ತವರು ಮನೆಯಾಗಿರುವಾಗ ಸುಮ್ಮನೇ ಇರಲು ಸಾಧ್ಯವೇ? ನಾನು ಮೊದಲ ಹಾಡು ಹಾಡಿದಾಗಲೇ ಆತ ಶುರು ಮಾಡಿದ್ದ. ತನ್ನ ಜೊತೆಗಿದ್ದವರನ್ನೂ ಪ್ರಚೋದಿಸಲು ಪ್ರಯತ್ನಿಸುತ್ತಿದ್ದ. ಅವರದೇ ಗುಂಪಿನಲ್ಲಿರುವ ವ್ಯಕ್ತಿ ಆತನನ್ನು ಸುಮ್ಮನಿರಲು ಹೇಳುತ್ತಿದ್ದರು. ನಾನು ವಿನಯಪೂರ್ವಕವಾಗಿ ನಾನು ಈಗಷ್ಟೇ ಮೊದಲ ಹಾಡು ಹಾಡಿದ್ದೇನೆ. ನನ್ನ ಪ್ಲೇ ಲಿಸ್ಟ್ ನಲ್ಲಿ ಕನ್ನಡ ಹಾಡುಗಳೂ ಇವೆ. ಮುಂದೆ ಹಾಅಡಲಿದ್ದೇನೆ ಎಂದು ಹೇಳಿದ್ದೆ. ನನ್ನ ಯೋಜನೆ ಪ್ರಕಾರ ಕಾರ್ಯಕ್ರಮ ನಡೆಸಲು ಅವಕಾಶ ಕೊಡಿ ಎಂದು ಕೇಳಿದೆ. ಆದರೆ ಆತ ಅದಕ್ಕೂ ಕಿವಿಗೊಡಲಿಲ್ಲ.
ಒಬ್ಬ ದೇಶ ಭಕ್ತ ವ್ಯಕ್ತಿಯಾಗಿ ನಾವು ಭಾಷೆ, ಜಾತಿ, ಧರ್ಮಗಳ ಬಗ್ಗೆ ಜಗಳವಾಡಬಾರದು. ಇದರಿಂದಲೇ ಪಹಲ್ಗಾಮ್ ನಲ್ಲಿ ದಾಳಿಯಾಯಿತು ಎಂದು ಹೇಳಿದ್ದೆ. ನಾನು ಅವರಿಗೆ ಬುದ್ಧಿ ಹೇಳಬೇಕಿತ್ತು. ಅಲ್ಲಿ ನೆರೆದಿದ್ದ ಸಾವಿರಾರು ಜನ ಶಿಕ್ಷಕರು, ವಿದ್ಯಾರ್ಥಿಗಳೂ ನನ್ನ ಮಾತುಗಳನ್ನು ಒಪ್ಪಿಕೊಂಡರು. ನಾನು ಕರ್ನಾಟಕದ ಕಾನೂನು, ಪೊಲೀಸರನ್ನು ಸಂಪೂರ್ಣ ಗೌರವಿಸುತ್ತೇನೆ, ಅವರ ಯಾವುದೇ ವಿಚಾರಣೆಗೂ ಸಿದ್ಧ. ಕರ್ನಾಟಕದಿಂದ ನನಗೆ ಸಾಕಷ್ಟು ಪ್ರೀತಿ ಸಿಕ್ಕಿದೆ. ಇದನ್ನು ನಾನು ಯಾವತ್ತೂ ಸ್ಮರಿಸಿಕೊಳ್ಳುತ್ತೇನೆ ಎಂದಿದ್ದಾರೆ.