ಬೆಂಗಳೂರು: ಕೇರಳ ಮಾದರಿಯಲ್ಲೇ ಕನ್ನಡ ಚಿತ್ರರಂಗದಲ್ಲೂ ಕಲಾವಿದೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನ ಮಾಡುವಂತೆ ಸಿಎಂಗೆ ಮನವಿ ಮಾಡಿದ ಬೆನ್ನಲ್ಲೇ ಇದೇ 16ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಲಾವಿದೆಯರು ಹಾಗೂ ಚಿತ್ರರಂಗದ ಪ್ರಮುಖರ ಸಭೆ ನಡೆಯಲಿದೆ.
ಕನ್ನಡ ಚಿತ್ರರಂಗದ ಕಲಾವಿದೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆಗೆ ಒತ್ತಾಯಿಸಿ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ನಿಯೋಗ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಮನವಿ ಮಾಡಿದ್ದರು. ಈ ಸಂಬಂದ ಇದೀಗ ವಾಣಿಜ್ಯ ಮಂಡಳಿ ಎಲ್ಲರನ್ನೂ ಒಗ್ಗೂಡಿಸಿ ಸಭೆ ನಡೆಸಲಿದೆ.
ಇನ್ನೂ ಚಿತ್ರರಂಗದಲ್ಲಿ ಕಲಾವಿದೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸೆ.13ರೊಳಗೆ ಸಭೆ ನಡೆಸಿ ಚರ್ಚಿಸಬೇಕು. ಚಿತ್ರರಂಗದ ನಟಿಯರನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲಿ ಚಿತ್ರರಂಗದ ಪ್ರಮುಖರೊಂದಿಗೆ ಸಭೆ ನಡೆಸಿ, ಸಮಿತಿ ರಚಿಸಲು ಒತ್ತಾಯಿಸುವಂತೆ ತೀರ್ಮಾನ ತೆಗೆದುಕೊಳ್ಳಿ ಎಂದು ಮಹಿಳಾ ಆಯೋಗ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದೆ.
ಇದೀಗ ಹಬ್ಬ ಇರುವುದರಿಂದ ಸಾಕಷ್ಟು ಕಲಾವಿದೆಯರು ಲಭ್ಯವಿಲ್ಲದ ಕಾರಣ ಸೆ.16ಕ್ಕೆ ವಾಣಿಜ್ಯ ಮಂಡಳಿ ಆವರಣದಲ್ಲಿ ಸಭೆ ಕರೆದಿದೆ.