ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ರನ್ನು ಎಸಿಪಿ ಚಂದನ್ ಅವರೇ ದುರುದ್ದೇಶದಿಂದ ಸಿಲುಕಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೆಹಮಯಿ ಕೃಷ್ಣ ಆರೋಪಿಸಿದ್ದಾರೆ.
ಇಷ್ಟು ದಿನ ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಆರೋಪಗಳನ್ನು ಮಾಡಿ ಸುದ್ದಿಯಾಗಿದ್ದ ಸ್ನೇಹಮಯಿ ಕೃಷ್ಣ ಈಗ ದರ್ಶನ್ ಪ್ರಕರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಎಸಿಪಿ ಚಂದನ್ ವಿರುದ್ಧ ಗಂಭೀರ ಆರೋಪ ಹೊರಿಸಿರುವ ಸ್ನೇಹಮಯಿ ಕೃಷ್ಣ ಪ್ರಕರಣದಲ್ಲಿ ದರ್ಶನ್ ರನ್ನು ಬೇಕೆಂದೇ ಕೊಲೆ ಮಾಡಿದ್ದಾರೆ ಎಂದು ಸಿಲುಕಿಸಲಾಗಿದೆ ಎಂದಿದ್ದಾರೆ.
ದರ್ಶನ್ ಗೆ ರೇಣುಕಾಸ್ವಾಮಿಯನ್ನು ಕೊಲೆ ಮಾಡಬೇಕು ಎಂಬ ಉದ್ದೇಶವಿದ್ದಿದ್ದರೆ ಚಿತ್ರದುರ್ಗದಲ್ಲೇ ಕೊಲೆ ಮಾಡುತ್ತಿದ್ದರು. ಬೆಂಗಳೂರುವರೆಗೆ ಯಾಕೆ ಕರೆತರಬೇಕಿತ್ತು. ಇಲ್ಲಿಗೆ ರೇಣುಕಾಸ್ವಾಮಿಯನ್ನು ಕರೆತಂದಿದ್ದು ದರ್ಶನ್ ಗೆ ಮಧ್ಯಾಹ್ನ 3 ಗಂಟೆಯವರೆಗೂ ಗೊತ್ತಿರಲಿಲ್ಲ. ಇದೆಲ್ಲಾ ಅವರ ಸಹವರ್ತಿಗಳು ಮಾಡಿದ್ದು.
ಇನ್ನು ಪ್ರಕರಣದಲ್ಲಿ ಪಿಎಸ್ ಐ ವಿನಯ್ ಮತ್ತು ಇನ್ಸ್ ಪೆಕ್ಟರ್ ಗಿರೀಶ್ ನಾಯಕ್ ಅವರದ್ದು ತಪ್ಪಾಗಿದೆ. ಅವರ ತಪ್ಪುಗಳನ್ನು ಮುಚ್ಚಿ ಹಾಕಲು ಎಸಿಪಿ ಚಂದನ್ ಬೇಕೆಂದೇ ದರ್ಶನ್ ರನ್ನು ಸಿಲುಕಿಸಿದ್ದಾರೆ. ಅಸಲಿಗೆ ದರ್ಶನ್ ಮೇಲೆ ಪಿತೂರಿ ಮಾಡಿ ರೇಣುಕಾಸ್ವಾಮಿಯನ್ನು ಇಲ್ಲಿಗೆ ಕರೆಸಿಕೊಂಡ ಆರೋಪ ಮಾತ್ರವಿದೆ.
ಆದರೆ ಕೊಲೆ ಮಾಡುವ ಉದ್ದೇಶ ದರ್ಶನ್ ಗಿರಲಿಲ್ಲ. ಅವರ ಸಹವರ್ತಿಗಳು ಮಾಡಿದ ಹಲ್ಲೆಯಿಂದ ಆತ ಸಾವನ್ನಪ್ಪಿರಬಹುದು. ಹೀಗಾಗಿ ಇಲ್ಲಿ ದರ್ಶನ್ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕಾಗಿರಲಿಲ್ಲ. ಆದರೆ ಎಸಿಪಿ ಚಂದನ್ ದುರುದ್ದೇಶದಿಂದ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಅಷ್ಟೇ ಅಲ್ಲ, ದೋಷಾರೋಪ ಪಟ್ಟಿಯಲ್ಲಿರುವ ವಿಚಾರಗಳನ್ನಿಟ್ಟುಕೊಂಡು ದರ್ಶನ್ ವಿರುದ್ಧ ಪಿತೂರಿ ಮಾಡಲಾಗಿದೆ ಎಂದು ಆರೋಪಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.