ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಹೊರಬಾರದಂತೆ ಅವರ ಆಪ್ತರು ಏನೆಲ್ಲಾ ಸರ್ಕಸ್ ಮಾಡಿದ್ದರು ಎಂಬುದು ಈಗ ಬಹಿರಂಗವಾಗಿದೆ. ಇದೀಗ ದರ್ಶನ್ ವಿರುದ್ಧ ಸಾಕ್ಷ್ಯ ಹೇಳದಂತೆ ಅವರ ಬಾಡಿಗಾರ್ಡ್ ನಾಗೇಶ್ ಬೆದರಿಕೆ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ.
ರೇಣುಕಾಸ್ವಾಮಿ ಹತ್ಯೆ ಬಳಿಕ ಆತನ ಬಟ್ಟೆಗಳನ್ನು ಆರೋಪಿಗಳು ಬಿಸಾಕಿದ್ದರು. ಇದರ ಬಗ್ಗೆ ಸುಳಿವು ನೀಡದಂತೆ ಪ್ರಮುಖ ಸಾಕ್ಷಿಗೆ ದರ್ಶನ್ ಬಾಡಿಗಾರ್ಡ್ ನಾಗೇಶ್ ಬೆದರಿಕೆ ಹಾಕಿದ್ದನಂತೆ. ಪ್ರಮುಖ ಸಾಕ್ಷಿ ನಾಗೇಶ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಲು ಬರುವಾಗ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸಮೀಪ ಸಾಕ್ಷಿಗೆ ಬೆದರಿಕೆ ಹಾಕಲಾಗಿದೆ.
ಕೃತ್ಯದ ವೇಳೆ ಬಿಸಾಡಿದ್ದ ಬಟ್ಟೆಗಳ ಬಗ್ಗೆ ಬಾಯಿ ಬಿಡಬಾರದು. ಒಂದು ವೇಳೆ ಪೊಲೀಸರಿಗೆ ಮಾಹಿತಿ ನೀಡಿದರೆ ನಿನ್ನನ್ನು ಸುಮ್ಮನೇ ಬಿಡಲ್ಲ ಎಂದು ನಾಗೇಶ್ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ನಾಗೇಶ್ ನನ್ನು ಕರೆಸಿ ಮುಚ್ಚಳಿಕೆ ಬರೆದು ಕಳುಹಿಸಿಕೊಟ್ಟಿದ್ದಾರೆ.
ಇನ್ನು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬೆನ್ನು ನೋವಿನ ನೆಪದಲ್ಲಿ ಜಾಮೀನು ಪಡೆದು ಆಸ್ಪತ್ರೆಯಲ್ಲಿರುವ ದರ್ಶನ್ ವಿರುದ್ಧ ಈಗ ಪೊಲೀಸರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ದರ್ಶನ್ ಗೆ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದಿದ್ದರೂ ಜಾಮೀನಿಗಾಗಿ ಅನಾರೋಗ್ಯವನ್ನೇ ದೊಡ್ಡ ನೆಪ ಮಾಡಲಾಯಿತೇ ಎಂಬ ಸಂಶಯ ಬಂದಿರುವ ಹಿನ್ನಲೆಯಲ್ಲಿ ಜಾಮೀನಿಗೆ ತಡೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದಾರೆ.