ಬೆಂಗಳೂರು: ಬೆನ್ನು ನೋವಿನ ಚಿಕಿತ್ಸೆ ನೆಪದಲ್ಲಿ ಮಧ್ಯಂತರ ಜಾಮೀನು ಪಡೆದು ಬಿಜಿಎಸ್ ಆಸ್ಪತ್ರೆ ಸೇರಿರುವ ನಟ ದರ್ಶನ್ ವೈದ್ಯರು ಸಲಹೆ ನೀಡಿದರೂ ಇನ್ನೂ ಶಸ್ತ್ರಚಿಕಿತ್ಸೆಗೊಳಗಾದೇ ತಡ ಮಾಡುತ್ತಿದ್ದಾರೆ. ಇದರ ಹಿಂದೆ ದೊಡ್ಡ ಪ್ಲ್ಯಾನ್ ಇದೆ ಎನ್ನಲಾಗುತ್ತಿದೆ.
ನಟ ದರ್ಶನ್ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಒಂದು ವಾರವಾಗಿದೆ. ಅವರಿಗೆ ಬೆನ್ನು ನೋವು ತೀವ್ರವಾಗಿದ್ದು ಕುಂಟುತ್ತಾ ನಡೆದಾಡುವ ಪರಿಸ್ಥಿತಿಯಿದೆ. ವಿವಿಧ ಪರೀಕ್ಷೆಗಳನ್ನು ನಡೆಸಿದ ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದಾರೆ. ಆದರೆ ಇದುವರೆಗೆ ದರ್ಶನ್ ಶಸ್ತ್ರಚಿಕಿತ್ಸೆಯನ್ನು ಮುಂದೂಡುತ್ತಲೇ ಬಂದಿದ್ದಾರೆ.
ಅತ್ತ ಪತ್ನಿ ವಿಜಯಲಕ್ಷ್ಮಿ ಮತ್ತು ಕುಟುಂಬಸ್ಥರು ದರ್ಶನ್ ಚಿಕಿತ್ಸಾ ವಿವರವನ್ನು ಮಾಧ್ಯಮಗಳಿಗೆ ಬಹಿರಂಗಪಡಿಸದಂತೆ ಆಸ್ಪತ್ರೆಗೆ ಮನವಿ ಮಾಡಿದ್ದಾರೆ. ಹೀಗಾಗಿ ಅಧಿಕೃತವಾಗಿ ಆಸ್ಪತ್ರೆ ಯಾವುದೇ ಹೇಳಿಕೆ ಬಿಡುಗಡೆ ಮಾಡುತ್ತಿಲ್ಲ. ಹಾಗಿದ್ದರೂ ದರ್ಶನ್ ಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದರೂ ತಡ ಮಾಡುತ್ತಿರುವುದಕ್ಕೆ ಒಂದು ಪ್ರಬಲ ಕಾರಣವಿದೆ ಎನ್ನಲಾಗುತ್ತಿದೆ.
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಪೊಲೀಸರು ಮತ್ತೆ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಹೀಗಾಗಿ ಅವರು ಅರ್ಜಿ ಸಲ್ಲಿಸುವವರೆಗೂ ಕಾದು ನೋಡುವ ತಂತ್ರ ಅನುಸರಿಸಲಿದ್ದಾರೆ. ಅದೇ ರೀತಿ ಶಸ್ತ್ರಚಿಕಿತ್ಸೆ ತಡ ಮಾಡಿದಷ್ಟೂ ಅದೇ ನೆಪದಲ್ಲಿ ಮಧ್ಯಂತರ ಜಾಮೀನು ಅವಧಿ ವಿಸ್ತರಿಸಬಹುದು ಎಂಬ ಲೆಕ್ಕಾಚಾರವೂ ಇದೆ ಎನ್ನಲಾಗುತ್ತಿದೆ.