ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಇಂದು ನಟ ದರ್ಶನ್ ಗೆ ಇಂದು ಮಹತ್ವದ ದಿನವಾಗಿದೆ. ದರ್ಶನ್ ಜಾಮೀನು ಅರ್ಜಿ ಮತ್ತೊಮ್ಮೆ ವಿಚಾರಣೆಗೆ ಬರಲಿದೆ.
ಬೆನ್ನು ನೋವಿನ ಕಾರಣದಿಂದ ನಟ ದರ್ಶನ್ ಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಅವರು ಆಸ್ಪತ್ರೆಗೆ ದಾಖಲಾಗಿ 15 ದಿನಗಳೇ ಕಳೆದಿವೆ. ಇನ್ನೂ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿಲ್ಲ. ಹೀಗಾಗಿ ಬೆನ್ನುನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂಬುದು ನೆಪ ಮಾತ್ರ ಎಂಬ ಸಂಶಯ ಹುಟ್ಟಿದೆ.
ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ಇದ್ದರೆ ಪಾರ್ಶ್ವವಾಯುವಿಗೆ ತುತ್ತಾಗಬಹುದು ಎಂದೆಲ್ಲಾ ಹೈಕೋರ್ಟ್ ನಲ್ಲಿ ದರ್ಶನ್ ಪರ ವಕೀಲರು ಹೇಳಿದ್ದರು. ಆದರೆ ಆಸ್ಪತ್ರೆಗೆ ದಾಖಲಾಗಿ ಇಷ್ಟು ದಿನ ಕಳೆದರೂ ಶಸ್ತ್ರಚಿಕಿತ್ಸೆಗೊಳಗಾಗದೇ ದಿನ ತಳ್ಳುತ್ತಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಜಾಮೀನು ರದ್ದುಗೊಳಿಸಬೇಕೆಂದು ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲು ಪೊಲೀಸರೂ ಸಿದ್ಧತೆ ನಡೆಸಿದ್ದಾರೆ.
ಈ ನಡುವೆ ಅವರು ಮಾಮೂಲು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ಇಂದು ಮತ್ತೊಮ್ಮೆ ನಡೆಯಲಿದೆ. ಈ ವೇಳೆ ಅವರ ಬೆನ್ನು ನೋವಿನ ಶಸ್ತ್ರಚಿಕಿತ್ಸೆ ವಿಚಾರ ಚರ್ಚೆಗೆ ಬರುವ ಸಾಧ್ಯತೆಯಿದೆ. ಈ ವಿಚಾರ ಅವರ ಶಸ್ತ್ರಚಿಕಿತ್ಸೆ ವಿಚಾರ ಚರ್ಚೆಗೆ ಬರಲಿದೆ. ಇದಕ್ಕೆ ಇಂದು ದರ್ಶನ್ ಪರ ವಕೀಲರು ಸೂಕ್ತ ಕಾರಣಗಳನ್ನು ನೀಡುವ ಅನಿವಾರ್ಯತೆಯಿದೆ.