ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡಿಗರ ಬಗ್ಗೆ, ಕನ್ನಡತನದ ಬಗ್ಗೆ ಖ್ಯಾತ ಗಾಯಕ ಸೋನು ನಿಗಂ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ಅವರಿಗೆ ಸಂಕಷ್ಟವನ್ನು ತಂದಿಟ್ಟಿದೆ.
ಸೋನು ನಿಗಂ ವಿರುದ್ಧ ಕನ್ನಡ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಸದಸ್ಯರು ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕನ್ನಡಿಗರ ಕನ್ನಡ ಪ್ರೇಮವನ್ನು ಭಯೋತ್ಪಾದಕತೆಗೆ ಹೋಲಿಸಿದ ಸೋನು ನಿಗಂ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದರ ಜೊತೆಗೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ದಾಖಲಿಸಲಿದ್ದಾರೆ.
ಕನ್ನಡಿಗರ ಕನ್ನಡ ಪ್ರೀತಿಯನ್ನು ಭಯೋತ್ಪಾದನೆಗೆ ಗಾಯಕ ಸೋನು ನಿಗಂ ಹೋಲಿಸಿದ್ದರು ಎಂದು ಆರೋಪಿಸಲಾಗಿದೆ. ಜೊತೆಗೆ ಕನ್ನಡ ಚಿತ್ರರಂಗ ಸೋನು ನಿಗಂ ಅವರನ್ನು ನಿಷೇಧಿಸಬೇಕೆಂದು ಸಹ ಕನ್ನಡಪರ ಹೋರಾಟಗಾರರು ಒತ್ತಾಯಿಸಿದ್ದಾರೆ.
ಸೋನು ನಿಗಂ ಒಬ್ಬ ಸಾಂಸ್ಕೃತಿಕ ಭಯೋತ್ಪಾದಕ. ಸೋನು ನಿಗಮ್ ಕನ್ನಡದಿಂದ ಬ್ಯಾನ್ ಮಾಡಬೇಕು. ಈ ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು, ಇಲ್ಲವಾದರೆ ಸೋನು ನಿಗಮ್ ಕನ್ನಡ ಹಾಡು ಹಾಡುವಂತಿಲ್ಲ, ಸೋನು ನಿಗಂ ಮೇಲೆ ನಿಷೇಧ ಹೇರಬೇಕು ಎಂದು ಕನ್ನಡ ಚಲನಚಿತ್ರ ಮಂಡಳಿ, ನಿರ್ಮಾಪಕ ಸಂಘಕ್ಕೆ ಆಗ್ರಹಿಸುತ್ತೇನೆ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.
ಬೆಂಗಳೂರಿನ ಕಾಲೇಜೊಂದರಲ್ಲಿ ಈಚೆಗೆ ಸೋನು ನಿಗಂ ಲೈವ್ ಗಾಯನಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದ ಆಗ ಮಾತನಾಡಿದ ಸೋನು ನಿಗಂ, ಕನ್ನಡ, ಕನ್ನಡ.. ಇದರಿಂದಲೇ ಪಹಲ್ಗಾಮ್ ದಾಳಿ ಆಗಿರುವುದು ಎನ್ನುವ ಮೂಲಕ ಕನ್ನಡಿಗರ ಕನ್ನಡಾಭಿಮಾನವನ್ನು ಭಯೋತ್ಪಾದಕತೆಗೆ ಹೋಲಿಸಿದ್ದರು. ಸೋನು ನಿಗಂ ಅವರ ಈ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ.