ಬೆಂಗಳೂರು: ಜೇಮ್ಸ್ ಸಿನಿಮಾವನ್ನು ಥಿಯೇಟರ್ ನಿಂದ ಕಿತ್ತು ಹಾಕುವ ಬಗ್ಗೆ ಒತ್ತಡಗಳು ಬರುತ್ತಿವೆ ಎಂಬ ಆರೋಪಗಳ ಬೆನ್ನಲ್ಲೇ ಇಂದು ಶಿವರಾಜ್ ಕುಮಾರ್ ದಂಪತಿ ಸಿಎಂ ಬಸವರಾಜ ಬೊಮ್ಮಾಯಿಯನ್ನು ಭೇಟಿಯಾಗಿದ್ದಾರೆ.
ಜೇಮ್ಸ್ ಕಿತ್ತು ಹಾಕಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಪ್ರದರ್ಶನ ಮಾಡಲು ಕೆಲವು ಬಿಜೆಪಿ ನಾಯಕರು ಒತ್ತಡ ಹೇರುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಖುದ್ದಾಗಿ ಫಿಲಂ ಚೇಂಬರ್ ಗೆ ಕರೆ ಮಾಡಿ ಜೇಮ್ಸ್ ತೆಗೆಯದಂತೆ ಸೂಚನೆ ನೀಡಿದ್ದರು.
ಅಲ್ಲದೆ, ಏನಾದರೂ ಸಮಸ್ಯೆಯಿದ್ದರೆ ಭೇಟಿಯಾಗುವಂತೆ ಶಿವರಾಜ್ ಕುಮಾರ್ ಗೆ ಹೇಳಿರುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದರು. ಇದರ ನಡುವೆಯೇ ಇಂದು ಶಿವಣ್ಣ, ಗೀತಾ ಶಿವರಾಜ್ ಕುಮಾರ್ ಮತ್ತು ಜೇಮ್ಸ್ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಸಿಎಂ ಬೊಮ್ಮಾಯಿಯವರನ್ನು ಭೇಟಿಯಾಗಿದ್ದಾರೆ. ಶಕ್ತಿಧಾಮದ ಕಾರ್ಯಕ್ರಮಕ್ಕೆ ಸಿಎಂರನ್ನು ಆಹ್ವಾನಿಸಲು ಈ ಭೇಟಿ ನಡೆದಿದೆ. ಇದೇ ಸಂದರ್ಭದಲ್ಲಿ ಜೇಮ್ಸ್ ಗೆ ಏನೇ ಸಮಸ್ಯೆಯಾದರೂ ಫಿಲಂ ಚೇಂಬರ್ ಗೆ ಹೇಳಿ. ನಮ್ಮ ಕಡೆಯಿಂದ ನಾವು ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.