Publish Date: Fri, 24 May 2024 (12:03 IST)
Updated Date: Fri, 24 May 2024 (12:05 IST)
ಚಿಕ್ಕಮಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ನಡುವೆ ರಿಷಬ್ ಶೆಟ್ಟಿ ಇದೀಗ ನಾಡಿನ ಶಕ್ತಿದೇವತೆಗಳ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಇದೆಲ್ಲಾ ಕಾಂತಾರ ಸಿನಿಮಾಗಾಗಿ ಎನ್ನಲಾಗಿದೆ.
ಮೊನ್ನೆಯಷ್ಟೇ ಚಿಕ್ಕಮಗಳೂರಿಗೆ ರಿಷಬ್ ಶೆಟ್ಟಿ ಭೇಟಿ ನೀಡಿದ್ದರು. ಅಲ್ಲಿನ ಪ್ರಸಿದ್ಧ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅದಾದ ಬಳಿಕ ಮಗಳ ಅಕ್ಷರಭ್ಯಾಸಕ್ಕೆ ಶಾರದಾಂಬೆಯ ಸನ್ನಿಧಿಗೆ ತೆರಳಿದ್ದರು. ಇದಾದ ಬಳಿಕ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಪತ್ನಿ ಸಮೇತರಾಗಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಕಾಂತಾರ ಸಿನಿಮಾ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಇದರ ನಡುವೆ ರಿಷಬ್ ದೇವಾಲಯಗಳಿಗೆ ಭೇಟಿ ನೀಡಲು ಕಾರಣವೂ ಇದೆ ಎನ್ನಲಾಗಿದೆ. ಕಾಂತಾರ ದೈವ, ದೇವರ ಕುರಿತಾದ ಸಿನಿಮಾ. ಇದಕ್ಕೆ ಯಾವುದೇ ತೊಂದರೆಯಾಗದಂತೆ ಶಕ್ತಿದೇವತೆಗಳಿಗೆ ಪೂಜೆ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ.
ಈ ಮೊದಲು ಕಾಂತಾರ ಮೊದಲ ಸಿನಿಮಾ ಮಾಡುವಾಗಲೂ ರಿಷಬ್ ನಾಡಿನ ಶಕ್ತಿದೇವತೆಗಳಿಗೆ ಪೂಜೆ ಸಲ್ಲಿಸಿದ್ದರಂತೆ. ಇದನ್ನು ಅವರೇ ಸಂದರ್ಶನಗಳಲ್ಲಿ ಹೇಳಿದ್ದರು. ಇದೀಗ ಕಾಂತಾರ ಚಾಪ್ಟರ್ 1 ಕ್ಕೂ ಯಾವುದೇ ಅಡ್ಡಿಯಾಗದಂತೆ ದೇವರ ಸೇವೆ ಮಾಡುತ್ತಿದ್ದಾರೆ ಎನ್ನಲಾಗಿದೆ.