ಚಿತ್ರದುರ್ಗ: ದರ್ಶನ್ ಆಂಡ್ ಗ್ಯಾಂಗ್ ನಿಂದ ಹಲ್ಲೆಗೊಳಗಾಗಿ ಹತ್ಯೆಯಾಗಿದ್ದಾನೆ ಎನ್ನಲಾಗಿರುವ ರೇಣುಕಾಸ್ವಾಮಿ ತಂದೆ ನಿನ್ನೆ ಮಾಧ್ಯಮಗಳ ಮುಂದೆ ಮಗನ ಬೈಕ್ ರಿಪೇರಿ ಮಾಡಿಸಲೂ ದುಡ್ಡಿಲ್ಲ, ದರ್ಶನ್ ಬಳಿ ದುಡ್ಡು ಕೇಳಿಲ್ಲ ಸೊಸೆಗೆ ಸರ್ಕಾರೀ ನೌಕರಿ ಕೊಡಿಸಿ ಎಂದು ಅಳಲು ತೋಡಿಕೊಂಡಿದ್ದಾರೆ.
ಇತ್ತೀಚೆಗೆ ದರ್ಶನ್ ರೆಗ್ಯುಲರ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅದಾದ ಬಳಿಕ ರೇಣುಕಾಸ್ವಾಮಿ ಕುಟುಂಬಕ್ಕೆ ದರ್ಶನ್ ಕೋಟಿ ಹಣ ಪರಿಹಾರವಾಗಿ ಕೊಟ್ಟಿದ್ದಾರೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿತ್ತು.
ಈ ಕಾರಣಕ್ಕೆ ಸುದ್ದಿಗೋಷ್ಠಿ ನಡೆಸಿದ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ, ನಾವು ಯಾರಿಂದಲೂ ಹಣ ಪಡೆದುಕೊಂಡಿಲ್ಲ. ದಯವಿಟ್ಟು ಇಲ್ಲದ ಸುದ್ದಿ ಹಬ್ಬಿಸಬೇಡಿ. ನಮ್ಮ ಬಳಿ ಮಗನ ಬೈಕ್ ರಿಪೇರಿ ಮಾಡಿಸಲೂ ದುಡ್ಡಿಲ್ಲ ಎಂದು ಕಣ್ಣೀರು ಹಾಕಿದ್ದರು.
ಮಗ ತೀರಿಕೊಂಡ ಮೇಲೆ ನಾವು ಆರ್ಥಿಕವಾಗಿ ಕಷ್ಟದಲ್ಲಿದ್ದೇವೆ. ಹಾಗಂತ ದರ್ಶನ್ ನಿಂದ ದುಡ್ಡು ತಗೊಂಡಿದ್ದೇವೆ ಎನ್ನುವುದು ಸುಳ್ಳು ಎಂದು ಕಾಶೀನಾಥಯ್ಯ ಹೇಳಿದ್ದಾರೆ. ನಾವು ಯಾರನ್ನೂ ಭೇಟಿ ಮಾಡಿಲ್ಲ, ನಮ್ಮನ್ನೂ ಯಾರೂ ಭೇಟಿ ಮಾಡಿಲ್ಲ. ದುಡ್ಡು ಕೊಟ್ಟಿದ್ದಾರೆ ಎಂಬುದೆಲ್ಲಾ ಸುಳ್ಳು. ದಯಮಾಡಿ ಸುಳ್ಳು ಸುದ್ದಿ ಹಬ್ಬಿಸಬೇಡಿ. ನಮ್ಮ ಸೊಸೆಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಕೊಡಿಸಿ ಎಂದಷ್ಟೇ ನಾವು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ.
ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಪದೇ ಪದೇ ಸರ್ಕಾರೀ ನೌಕರಿಗೆ ಯಾಕೆ ಮನವಿ ಮಾಡುತ್ತಿದ್ದೀರಿ? ನಿಮ್ಮ ಮಗ ಏನು ಒಳ್ಳೆ ಕೆಲಸ ಮಾಡಿದ್ದನೇ? ಕಂಡವರ ಮನೆ ಹೆಣ್ಣು ಮಕ್ಕಳಿಗೆ ಅಶ್ಲೀಲ ಸಂದೇಶ ಕಳುಹಿಸುವುದು ತಪ್ಪಲ್ವಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಹಾರೈಸಿದ್ದಾರೆ.