ಮುಂಬೈ: ನಿನ್ನೆ ಬೆಳಗಿನ ಜಾವ ದುಷ್ಕರ್ಮಿಗಳಿಂದ ಚಾಕು ಇರಿತಕ್ಕೊಳಗಾದ ನಟ ಸೈಫ್ ಅಲಿ ಖಾನ್ ರನ್ನು ಆಸ್ಪತ್ರೆಗೆ ಕರೆದೊಯ್ಯಲು ಕಾರು ರೆಡಿ ಇರಲಿಲ್ಲ ಎಂಬ ಹೇಳಿಕೆ ಈಗ ಟ್ರೋಲ್ ಆಗುತ್ತಿದೆ.
ಸೈಫ್ ಕೋಟ್ಯಾಂತರ ಆಸ್ತಿಗಳ ಒಡೆಯ. ಆದರೆ ಅವರಿಗೆ ತೀವ್ರ ಗಾಯವಾಗಿ ಪ್ರಾಣಾಪಾಯದಲ್ಲಿದ್ದಾಗ ಆಸ್ಪತ್ರೆಗೆ ಕರೆದೊಯ್ದಿದ್ದು ಒಂದು ಆಟೋ ರಿಕ್ಷಾದಲ್ಲಿ. ಅವರ ಪುತ್ರ ಇಬ್ರಾಹಿಂ ತಂದೆಯನ್ನು ಸುಮಾರು 2 ಕಿ.ಮೀ. ದೂರದಲ್ಲಿರುವ ಆಸ್ಪತ್ರೆಗೆ ಆಟೋದಲ್ಲಿ ಕರೆದೊಯ್ದಿದ್ದ ಎಂದು ವರದಿಯಾಗಿದೆ.
ಈ ಸಂದರ್ಭದಲ್ಲಿ ಕಾರು ರೆಡಿ ಇರಲಿಲ್ಲ. ಅದಕ್ಕೇ ಆಟೋದಲ್ಲಿ ಕರೆದೊಯ್ಯಲಾಯಿತು ಎಂದು ವರದಿಯಾಗಿದ್ದು ಇದಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಕಾರು ರೆಡಿ ಇರಲಿಲ್ಲ ಎಂದರೆ ಅರ್ಥವೇನು? ಸೈಫ್ ಮನೆಯ ಕಾರುಗಳೂ ಹೊರಗಡೆ ಹೋಗುವಾಗ ರೆಡಿ ಆಗಬೇಕಾ? ಡಿಸೈನರ್ ಸೂಟ್ ಆಗಬೇಕಾ ಎಂದೆಲ್ಲಾ ಹಲವರು ಟ್ರೋಲ್ ಮಾಡಿದ್ದಾರೆ.
ಮತ್ತೆ ಕೆಲವರು ಎಷ್ಟು ದುಡ್ಡಿದ್ದರೇನು ಬಂತು? ಆಪತ್ಕಾಲದಲ್ಲಿ ಹಣವೆಲ್ಲಾ ಉಪಯೋಗವಾಗಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ. ಇನ್ನು ಕೆಲವರು ಅಷ್ಟೆಲ್ಲಾ ಎದೆಯೆತ್ತರಕ್ಕೆ ಬೆಳೆದಿರುವ ಮಗ ಇಬ್ರಾಹಿಂಗೆ ಕಾರು ಡ್ರೈವಿಂಗ್ ಬರಲ್ವಾ ಎಂದು ಕಾಲೆಳೆದಿದ್ದಾರೆ. ಅದೇನೇ ಇದ್ದರೂ ಆ ಕ್ಷಣಕ್ಕೆ ಏನು ಉಚಿತವೆನಿಸಿತೋ ಅದನ್ನು ಮಾಡಿ ತಂದೆಯ ಪ್ರಾಣ ಕಾಪಾಡಿದ್ದಾರೆ ಎನ್ನುವುದನ್ನು ಮೆಚ್ಚಲೇಬೇಕು.