ಹೈದರಾಬಾದ್: ತೆಲುಗಿನಲ್ಲಿ ಬ್ಯುಸಿಯಾದ ಮೇಲೆ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಕನ್ನಡ ಸಿನಿಮಾ ಕಡೆ ತಿರುಗಿಯೂ ನೋಡುತ್ತಿಲ್ಲ. ಈ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ರಶ್ಮಿಕಾ ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ನಲ್ಲೂ ಬಹುಬೇಡಿಕೆಯ ನಟಿ. ಆದರೆ ಕನ್ನಡದಲ್ಲಿ ಪೊಗರು ಸಿನಿಮಾ ಬಳಿಕ ರಶ್ಮಿಕಾ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಕನ್ನಡ ಸಿನಿಮಾದಲ್ಲಿ ಯಾಕೆ ಅಭಿನಯಿಸುತ್ತಿಲ್ಲ ಎಂದು ರಶ್ಮಿಕಾಗೆ ಪ್ರಶ್ನಿಸಲಾಗಿದೆ.
ಇದಕ್ಕೆ ರಶ್ಮಿಕಾ ಸದ್ಯಕ್ಕೆ ನಾನು ಈಗಾಗಲೇ ಒಪ್ಪಿಕೊಂಡಿರುವ ತೆಲುಗು, ಹಿಂದಿ, ತಮಿಳು ಸಿನಿಮಾಗಳೇ ಸಾಕಷ್ಟಿವೆ. ಈಗಾಗಲೇ ಬಿಡುವಿಲ್ಲದೇ ದುಡಿಯುತ್ತಿದ್ದೇನೆ. ಒಂದು ವೇಳೆ ನಾನು ಕನ್ನಡ ಸಿನಿಮಾವನ್ನೂ ಒಪ್ಪಿಕೊಂಡರೆ ವರ್ಷದ 365 ದಿನವೂ ಬಿಡುವಿಲ್ಲದೇ ದುಡಿಯಬೇಕಾಗುತ್ತದೆ ಎಂದು ರಶ್ಮಿಕಾ ಹೇಳಿದ್ದಾರೆ.