Publish Date: Tue, 09 Jul 2019 (09:24 IST)
Updated Date: Tue, 09 Jul 2019 (09:26 IST)
ಬೆಂಗಳೂರು: ಅಪ್ಪಟ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಕ್ಲಿಕ್ ಆಗಿದ್ದೇ ಆಗಿದ್ದು. ಈಗ ರಶ್ಮಿಕಾಗೆ ಕನ್ನಡ ಸಿನಿಮಾದಲ್ಲಿ ನಟಿಸಲು ಮನಸ್ಸಿದ್ದರೂ ಪುರುಸೊತ್ತಿಲ್ಲದಷ್ಟು ಬ್ಯುಸಿಯಾಗಿದ್ದಾರೆ.
ತೆಲುಗು, ತಮಿಳಿನ ಎಲ್ಲಾ ಸ್ಟಾರ್ ಹೀರೋಗಳಿಗೂ ಈಗ ರಶ್ಮಿಕಾನೇ ನಾಯಕಿಯಾಗಬೇಕು. ತೆಲುಗಿನಲ್ಲಿ ವಿಜಯ್ ದೇವರಕೊಂಡ, ಮಹೇಶ್ ಬಾಬು, ನಿತಿನ್ ಜತೆಗೆ, ತಮಿಳಿನಲ್ಲಿ ಕಾರ್ತಿ, ವಿಜಯ್ ಜತೆಗೆ ಸಿನಿಮಾ ಒಪ್ಪಿಕೊಂಡಿರುವ ರಶ್ಮಿಕಾ ಈಗ ಕನ್ನಡದಲ್ಲಿ ನಟಿಸುತ್ತಿರುವ ಏಕೈಕ ಸಿನಿಮಾವೆಂದರೆ ಧ್ರುವ ಸರ್ಜಾ ಜತೆಗೆ ಪೊಗರು.
ಈಗಾಗಲೇ ರಶ್ಮಿಕಾ ಸಂಭಾವನೆ ಕೋಟಿ ತಲುಪಿದೆ ಎಂಬ ಸುದ್ದಿಯಿದೆ. ಅದು ಸಹಜವೇ. ಇಷ್ಟೊಂದು ಬೇಡಿಕೆಯಿರುವ ನಟಿ ಕೋಟಿ ಸಂಭಾವನೆ ಪಡೆಯುವುದು ಅಚ್ಚರಿಯೇನೂ ಅಲ್ಲ. ಆದರೆ ಕನ್ನಡದಲ್ಲಿ ಕಡಿಮೆ ಸಿನಿಮಾ ಮಾಡಿ ಬೇರೆ ಭಾಷೆಗಳಲ್ಲಿ ಮಿಂಚುತ್ತಿರುವುದಕ್ಕೆ ಕನ್ನಡ ಪ್ರೇಕ್ಷಕರಲ್ಲಿ ಮಾತ್ರ ಕೊಂಚ ಬೇಸರವಿದೆ. ಅದೇನೇ ಇದ್ದರೂ ಅಪ್ಪಟ ಕನ್ನಡ ಮಣ್ಣಿನ ಬೆಡಗಿ ಈಗ ಪರಭಾಷೆ ಸ್ಟಾರ್ ಗಳಿಗೆ ಲಕ್ಕಿ ಹೀರೋಯಿನ್ ಆಗಿರುವುದಂತೂ ಸುಳ್ಳಲ್ಲ.