ಬೆಂಗಳೂರು: ಚಿನ್ನ ಕಳ್ಳಸಾಗಣಿಕೆ ಕೇಸ್ ನಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಕುರಿತ ಒಂದೊಂದೇ ವಿಚಾರಗಳು ಬಯಲಾಗುತ್ತಿವೆ. ಈಕೆಗೆ ಕೆಐಡಿಬಿ ವತಯಿಂದ 12 ಎಕರೆ ಜಮೀನು ಸಿಕ್ಕಿದ್ದು ಹೇಗೆ, ರಾಜಕೀಯ ನಾಯಕರ ನಂಟಿನ ಬಗ್ಗೆ ಒಂದೊಂದೇ ವಿಚಾರಗಳು ಹೊರಬೀಳುತ್ತಿವೆ.
ನಟಿ ರನ್ಯಾ ರಾವ್ ಗೆ ಸರ್ಕಾರದಿಂದಲೇ 12 ಎಕರೆ ಜಮೀನು ನೀಡಲಾಗಿದೆ ಎಂದು ಸುದ್ದಿಯಾಗಿತ್ತು. ಇದರ ನಡುವೆ ಹಾಲಿ ಸರ್ಕಾರದ ಇಬ್ಬರು ಸಚಿವರ ಜೊತೆ ರನ್ಯಾಗೆ ನಂಟಿತ್ತು ಎನ್ನುವುದು ಬಯಲಾಗಿತ್ತು. ಹೀಗಾಗಿ ವಿಪಕ್ಷ ಬಿಜೆಪಿ ಹಾಲಿ ಸರ್ಕಾರದ ಕೃಪಾಕಟಾಕ್ಷದಿಂದಲೇ ರನ್ಯಾಗೆ 12 ಎಕರೆ ಜಮೀನು ಸಿಕ್ಕಿದೆ ಎಂದು ವಾಗ್ದಾಳಿ ನಡೆಸಿತ್ತು.
ಇದೀಗ ರನ್ಯಾಗೆ ಜಮೀನು ನೀಡಿರುವ ಬಗ್ಗೆ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮ (ಕೆಐಡಿಬಿ) ಇದರ ಬಗ್ಗೆ ಸ್ಪಷ್ಟನೆ ನೀಡಿದೆ. ರನ್ಯಾಗೆ ಜಮೀನು ಮಂಜೂರು ಮಾಡಿದ್ದು ಹಿಂದಿನ ಸರ್ಕಾರ, ಇದು 2023 ರಲ್ಲಿ ಮಂಜೂರಾಗಿತ್ತು. ಸ್ಟೀಲ್ ಕಾರ್ಖಾನೆಯೊಂದನ್ನು ಸ್ಥಾಪಿಸುವ ಉದ್ದೇಶಕ್ಕೆ ಮಂಜೂರು ಮಾಡಲಾಗಿತ್ತು ಎಂದು ಕೆಐಡಿಬಿ ಸ್ಪಷ್ಟನೆ ನೀಡಿದೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರನ್ಯಾರನ್ನು ಬಂಧಿಸುವಾಗ 12.56 ಕೋಟಿ ರೂ. ಮೊತ್ತದ ಚಿನ್ನ ವಶಪಡಿಸಿಕೊಳ್ಳಲಾಗಿತ್ತು. ಮನೆಯಿಂದ 2.06 ಕೋಟಿ ರೂ. ಮೊತ್ತದ ಚಿನ್ನ, 2.67 ಕೋಟಿ ರೂ. ಮೊತ್ತದ ನಗದು ವಶಪಡಿಸಿಕೊಳ್ಳಲಾಗಿತ್ತು. ಹೀಗಾಗಿ ಈಕೆಯ ಐಷಾರಾಮಿ ಜೀವನದ ಹಿಂದಿನ ವ್ಯಕ್ತಿಗಳು ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.