ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣಿಕೆ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್ ಗೆ ರಾಜ್ಯದ ಇಬ್ಬರು ಸಚಿವರ ಸಹಾಯವಿದೆ ಎಂದು ವರದಿಯಾಗಿದೆ. ಇದೀಗ ಈ ಬಗ್ಗೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದೆ.
ಚಿತ್ರನಟಿ ರನ್ಯಾ ರಾವ್ ದುಬೈನಿಂದ ಚಿನ್ನಸಾಗಣಿಕೆ ಆರೋಪದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಬಂಧಿತರಾಗಿದ್ದರು. ಇದಾದ ಬಳಿಕ ನಟಿಯನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ಈ ವೇಳೆ ಅನೇಕ ವಿಚಾರಗಳು ಬಯಲಿಗೆ ಬರುತ್ತಿವೆ.
ಇದೀಗ ರನ್ಯಾಗೆ ಸರ್ಕಾರದ ಇಬ್ಬರು ಸಚಿವರ ಸಹಾಯವಿತ್ತೇ ಎಂಬ ಅನುಮಾನವಿದೆ. ಬಂಧನಕ್ಕೊಳಗಾದ ಮೇಲೆ ತನ್ನ ಸಹಾಯಕ್ಕಾಗಿ ಈ ಸಚಿವರಿಗೆ ಬಂಧನದ ವೇಳೆಯೇ ನಟಿ ಕರೆ ಮಾಡಿದ್ದಳು ಎಂಬ ಅನುಮಾನ ಮೂಡಿದೆ. ಬಂಧನದವೇಳೆ ನಟಿ ಮೊಬೈಲ್ ನಿಂದ ಸಚಿವರೊಬ್ಬರಿಗೆ ಕರೆ ಮಾಡಲು ಯತ್ನಿಸಿದಾಗ ತಕ್ಷಣವೇ ಅಧಿಕಾರಿಗಳು ಆಕೆಯ ಕೈಯಿಂದ ಮೊಬೈಲ್ ಕಿತ್ತುಕೊಂಡಿದ್ದಾರೆ ಎನ್ನಲಾಗಿದೆ.
ಇದೀಗ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಈ ಪ್ರಕರಣದಲ್ಲಿ ಸಚಿವರ ಕೈವಾಡವಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ಈ ಪ್ರಕರಣ ರಾಜ್ಯ ಸರ್ಕಾರಕ್ಕೂ ಕಳಂಕ ತಂದಿದೆ. ಸಚಿವರು ಭಾಗಿಯಾಗಿದ್ದರೆ ಮುಖ್ಯಮಂತ್ರಿಗಳು ಪ್ರಾಮಾಣಿಕ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ಅದರ ಹೊಣೆ ಮುಖ್ಯಮಂತ್ರಿಗಳೇ ಹೊರಬೇಕಾಗುತ್ತದೆ ಎಂದಿದ್ದಾರೆ.