ರಣಹೇಡಿ: ರೈತರ ಕಥೆಯೊಳಗೊಂದು ಮಧುರ ಪ್ರೇಮಗಾಥೆ!

ಗುರುವಾರ, 28 ನವೆಂಬರ್ 2019 (14:44 IST)
ಮನು ಕೆ ಶೆಟ್ಟಿಹಳ್ಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ರಣಹೇಡಿ ಚಿತ್ರ ಇದೇ ತಿಂಗಳ 29ರಂದು ತೆರೆಗಾಣಲಿದೆ. ಸುರೇಶ್ ನಿರ್ಮಾಣ ಮಾಡಿರೋ ಈ ಸಿನಿಮಾದಲ್ಲಿ ಕನ್ನಡಕ್ಕೆ ತೀರಾ ಹೊಸತೆನ್ನುವಂಥಾ ಕಥೆಯೊಂದಿದೆ ಅನ್ನೋ ವಿಚಾರ ಈಗಾಗಲೇ ಪ್ರೇಕ್ಷಕರಿಗೆ ಸ್ಪಷ್ಟವಾಗಿದೆ.

ಇದರಲ್ಲಿ ರೈತರ ಸಮಸ್ಯೆಗಳಿಗೆ ಬೆಳಕು ಚೆಲ್ಲುತ್ತಲೇ ರೈತಾಪಿ ವರ್ಗದ ಮೂಲಕ ಮರೆಯಾಗುತ್ತಿರೋ ಗ್ರಾಮ್ಯ ಸೊಗಡು ಸಾರುವ ಕಥಾನಕವಿದೆ. ನಿರ್ಮಾಪಕ ಸುರೇಶ್ ಅವರ ಸಾಥ್ನೊಂದಿಗೆ ಈ ವಿಭಿನ್ನ ಕಥಾನಕ ಯಾವ ಸ್ಟಾರ್ ಸಿನಿಮಾಗಳಿಗೂ ಕಮ್ಮಿಯಿಲ್ಲದಂಥಾ ಅದ್ದೂರಿತನ ಮತ್ತು ತಾಜಾತನಗಳೊಂದಿಗೆ ಮೂಡಿ ಬಂದಿದೆ ಎಂಬ ಭರವಸೆ ಚಿತ್ರ ತಂಡದಲ್ಲಿದೆ.
 
ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸಿರುವ ನಿರ್ದೇಶಕ ಮನು ಕೆ ಶೆಟ್ಟಿಹಳ್ಳಿ ಕಟ್ಟುಮಸ್ತಾದ ಗ್ರಾಮ್ಯ ಸೊಗಡಿನ ಕಥೆಯೊಂದಿಗೆ ಈ ಸಿನಿಮಾವನ್ನು ರೂಪಿಸಿದ್ದಾರೆ. ಇಲ್ಲಿ ಪ್ರಧಾನವಾಗಿ ರೈತಾಪಿ ವರ್ಗದ ಕಷ್ಟ ಸುಖಗಳತ್ತ ಬೆಳಕು ಚೆಲ್ಲಲಾಗಿದೆಯಂತೆ. ಆದರೆ ಕಥೆಯ ಹರವು ಕೇವಲ ಅಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಇದರೊಂದಿಗೆ ಮರೆಯಾಗುತ್ತಿರುವ ಗ್ರಾಮ್ಯ ಸೊಗಡನ್ನು ದಾಖಲಿಸುವಂಥಾ, ಮರೆಯಾಗುತ್ತಿರೋ ಅದೆಷ್ಟೋ ಆಚಾರ ವಿಚಾರಗಳನ್ನು ಈ ಕಾಲಮಾನದ ಯುವ ಸಮುದಾಯಕ್ಕೆ ಪರಿಚಯಿಸುವಂಥಾ ಪ್ರಯತ್ನವೂ ಇಲ್ಲಿ ಪರಿಣಾಮಕಾರಿಯಾಗಿಯೇ ನಡೆದಿದೆ.
 
ಇಷ್ಟೆಲ್ಲ ವಿವರ ಕೇಳಿದ ಮೇಲೆ ಇಡೀ ಚಿತ್ರದ ಕಥೆ ರೈತಾಪಿ ವರ್ಗ ಮತ್ತು ಆಚಾರ ವಿಚಾರಗಳ ಸುತ್ತಲೇ ಗಿರಕಿ ಹೊಡೆಯುತ್ತೆ ಅಂದುಕೊಳ್ಳುವಂತಿಲ್ಲ. ಇದರಲ್ಲಿ ಗ್ರಾಮೀಣ ಭಾಗದ ಜನರ ಬದುಕಲ್ಲಿ ಹಾಸು ಹೊಕ್ಕಾಗಿರುವ ಎಲ್ಲ ಅಂಶಗಳೂ ಇವೆ. ಹಾಗಿದ್ದ ಮೇಲೆ ಪ್ರೀತಿ ಪ್ರೇಮದ ವೃತ್ತಾಂತ ಇರಲೇ ಬೇಕು. ಖಂಡಿತಾ ಇಲ್ಲೊಂದು ತಾಜಾ ತಾಜ ಪ್ರೇಮಕಥನವಿದೆ. ಅದರಲ್ಲಿ ಐಶ್ವರ್ಯ ಮತ್ತು ಕರ್ಣ ಕುಮಾರ್ ಎಲ್ಲರಿಗೂ ಹಿಡಿಸುವಂತೆಯೇ ನಟಿಸಿದ್ದಾರಂತೆ. ಈ ಪ್ರೇಮ ವೃತ್ತಾಂತ ಸಹ ಸದರಿ ಸಿನಿಮಾದ ಮುಖ್ಯ ಜೀವಾಳ. ಅದು ಕೂಡಾ ಎಲ್ಲಿಯೂ ಅತಿರೇಕ ಅನ್ನಿಸದಂತೆ, ಗ್ಯಾಮ್ಯ ಸೊಗಡಿಗೆ ಅನುಸಾರವಾಗಿಯೇ ದೃಷ್ಯೀಕರಿಸಲ್ಪಟ್ಟಿದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಣಹೇಡಿ: ಡಿ ಗ್ಲಾಮ್ ಪಾತ್ರದಲ್ಲಿ ಮಿಂಚಲಿದ್ದಾರೆ ಐಶ್ವರ್ಯಾ ರಾವ್!