Select Your Language

Notifications

webdunia
webdunia
webdunia
webdunia

ರಣಹೇಡಿ: ಚೆಂದದ ಕಥೆಗೆ ಸಾಥ್ ಕೊಟ್ಟ ಸುರೇಶ್!

ರಣಹೇಡಿ: ಚೆಂದದ ಕಥೆಗೆ ಸಾಥ್ ಕೊಟ್ಟ ಸುರೇಶ್!
ಬೆಂಗಳೂರು , ಗುರುವಾರ, 28 ನವೆಂಬರ್ 2019 (14:38 IST)
ಸದಭಿರುಚಿಯ, ಈ ನೆಲದ ರೈತರ ಸಮಸ್ಯೆಗಳಿಗೆ, ಬದುಕಿಗೆ ಕಣ್ಣಾಗುವಂಥ ಚಿತ್ರಗಳು ತೆರೆಗಾಣುತ್ತಿರಬೇಕೆಂಬುದು ಹಲವರ ಕನಸು. ಆದರೆ ಇಂಥಾ ಸಿನಿಮಾಗಳನ್ನು ಅಣಿಗೊಳಿಸಲು ಕೇವಲ, ಕ್ರಿಯೇಟಿವಿಟಿ, ಒಂದೊಳ್ಳೆ ಕಥೆ ಮತ್ತು ಅದನ್ನು ಪರಿಣಾಮಕಾರಿಯಾಗಿ ದೃಷ್ಯೀಕರಿಸಬಲ್ಲ ತಂಡ ಇದ್ದರೆ ಸಾಲುವುದಿಲ್ಲ. ಅದಕ್ಕೆ ಆರ್ಥಿಕವಾಗಿ ಬೆಂಬಲ ಬೇಕಾಗುತ್ತದೆ.

ಇಡೀ ಚಿತ್ರದ ಜವಾಬ್ದಾರಿ ತನ್ನದೇ ಎಂಬಂತೆ ಪರಿಭಾವಿಸಿ ಎಲ್ಲ ವ್ಯಾಪಾರ, ವಹಿವಾಟಿನಿಂದ ಹೊರತಾಗಿಯು ಸಿನಿಮಾ ಪ್ರೀತಿ ಹೊಂದಿರೋ ನಿರ್ಮಾಪಕರು ಬೇಕಾಗುತ್ತಾರೆ. ಆದರೆ ಅಂಥವರು ಸಿಗೋದು ಬಲು ವಿರಳ. ರಣಹೇಡಿಯಂಥಾ ನೆಲದ ಕಂಪಿನ ಕಥೆಯನ್ನು ರೆಡಿ ಮಾಡಿಟ್ಟುಕೊಂಡಿದ್ದ ನಿರ್ದೇಶಕ ಮನು ಕೆ ಶೆಟ್ಟಿಹಳ್ಳಿ ಪಾಲಿಗೆ ಅದೃಷ್ಟವೆಂಬಂತೆ ಸಿಕ್ಕಿದ್ದವರು ನಿರ್ಮಾಪಕ ಸುರೇಶ್.
 
ಈ ಹಿಂದೆಯೂ ಸುರೇಶ್ ಒಂದು ಸದಭಿರುಚಿಯ ಸಿನಿಮಾ ನಿರ್ಮಾಣ ಮಾಡಿದ್ದರು. ಹೆಚ್ಚಿನ ನಿರ್ಮಾಪಕರು ಪಕ್ಕಾ ಕಮರ್ಶಿಯಲ್ ಮೆಥೆಡ್ಡಿನ ಸಿನಿಮಾಗಳತ್ತ ಮಾತ್ರವೇ ಆಕರ್ಷಿತರಾಗುತ್ತಾರೆ. ಆದರೆ ಸಮಾಜಮುಖಿಯಾದ, ಪ್ರೇಕ್ಷಕರಿಗೆ ದಾಟಿಕೊಳ್ಳಲೇ ಬೇಕಾದ ಕಥೆಯನ್ನೊಳಗೊಂಡಿರೋ ಸಿನಿಮಾಗಳತ್ತ ಒಲವು ಹೊಂದಿರುವವರು ಕಡಿಮೆಯೇ. ಆದರೆ ಸುರೇಶ್ ಅವರದ್ದು ಭಿನ್ನ ಅಭಿರುಚಿ. ವ್ಯಾಪಾರ ವಹಿವಾಟುಗಳ ಪಾಡು ಏನೇ ಆದರೂ ತಾವು ನಿರ್ಮಾಣ ಮಾಡೋ ಸಿನಿಮಾಗಳು ಮಹತ್ವದ ಸಂದೇಶ ಕೊಡುವಂತಿರಬೇಕೆಂಬುದು ಸುರೇಶ್ ಅವರ ಅಭಿಲಾಷೆ. ಈ ಕಾರಣದಿಂದಲೇ ಮನು ಕೆ ಶೆಟ್ಟಿಹಳ್ಳಿಯವರ ಕಥೆಯನ್ನು ಮೆಚ್ಚಿಕೊಂಡು ಯಾವುದಕ್ಕೂ ಕೊರತೆಯಾಗದಂತೆ ರಣಹೇಡಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
 
ಹಲವಾರು ವರ್ಷಗಳ ಕಾಲ ಚಿತ್ರರಂಗದಲ್ಲಿ ಬರಹಗಾರರಾಗಿ, ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದವರು ಮನು ಕೆ ಶೆಟ್ಟಿಹಳ್ಳಿ. ಹೀಗೆ ಅನುಭವ ದಕ್ಕಿಸಿಕೊಂಡಿದ್ದ ಅವರ ಪ್ರಧಾನ ಉದ್ದೇಶವಾಗಿದ್ದದ್ದು ಸ್ವತಂತ್ರ ನಿರ್ದೇಶನ. ಮಂಡ್ಯ ಕಡೆಯ ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದಿದ್ದ ಅವರ ಪಾಲಿಗೆ ರೈತಾಪಿ ವರ್ಗದ ಆಂತರ್ಯ ಸುಸ್ಪಷ್ಟ. ಅದರ ಆಧಾರದಲ್ಲಿಯೇ ಚೆಂದದ್ದೊಂದು ಕಥೆ ರೆಡಿ ಮಾಡಿಕೊಂಡಿದ್ದ ಮನುಗೆ ತನ್ನನ್ನು ನಂಬಿ ಯಾರಾದರೂ ಕಾಸು ಹೂಡಬಹುದೆಂಬ ನಂಬಿಕೆಯೇ ಮಾಸಲಾಗುವಂಥಾ ಸಂದರ್ಭವೂ ಬಂದೊದಗಿತ್ತು. ಇಂಥಾ ಹೊತ್ತಿನಲ್ಲಿಯೇ ಸಿಕ್ಕವರು ನಿರ್ಮಾಪಕ ಸುರೇಶ್. ಹಾಗೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದ ಸುರೇಶ್ ಯಾವ ಸ್ಟಾರ್ ಸಿನಿಮಾಗಳಿಗೂ ಕಡಿಮೆಯಿಲ್ಲದಂತೆ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರಂತೆ. ಹೀಗೆ ಅಣಿಗೊಂಡಿರುವ ರಣಹೇಡಿ ಇದೇ ತಿಂಗಳ 29ರಂದು ತೆರೆಗಾಣಲಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

`ಗಂಟುಮೂಟೆ’ಯೊಳಗಿನ ಬೆರಗನ್ನು ಮೆಚ್ಚಿಕೊಂಡ ಕಿಚ್ಚ!