ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಮ್ಯಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಬಗ್ಗೆ ಬರೆದಿರುವ ಬರಹವೊಂದು ನಿಮಗೆ ಅಚ್ಚರಿಯಾಗಬಹುದು.
ಡಿಕೆ ಶಿವಕುಮಾರ್ ಮೇಲೆ ನಟಿ ರಮ್ಯಾಗೆ ಎಂಥಾ ಗೌರವವಿದೆ ಎಂದು ಎಲ್ಲರಿಗೂ ಗೊತ್ತೇ ಇದೆ. ರಮ್ಯಾ ರಾಜಕೀಯದಲ್ಲಿ ಸ್ಥಾನ ಮಾನ ಪಡೆಯಲು ಡಿಕೆಶಿ ಕೂಡಾ ಕಾರಣವೇ. ಈಗ ಡಿಕೆಶಿ ಮಗಳು ಐಶ್ವರ್ಯಾ ಕಾಲೇಜಿನ ಕಾರ್ಯಕ್ರಮದಲ್ಲಿ ರಮ್ಯಾ ಪಾಲ್ಗೊಂಡಿದ್ದಾರೆ.
ಈ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡ ರಮ್ಯಾ, ಡಿಕೆಶಿ ಮಗಳ ಜೊತೆ ತಮ್ಮ ಬಾಂಧವ್ಯ ಹೇಗಿತ್ತು ಎನ್ನುವುದನ್ನು ಬರೆದುಕೊಂಡಿದ್ದಾರೆ. ಐಶು, ನಿನ್ನನ್ನು ಚಿಕ್ಕಂದಿನಿಂದ ನೋಡಿದ್ದೇನೆ. ಈಗ ನೀನು ಬೆಳೆದು ನಿಂತಿರುವ ರೀತಿ ನನಗೆ ಹೆಮ್ಮೆ ಎನಿಸುತ್ತದೆ. ಚಿಕ್ಕವಳಿದ್ದಾಗ ನಿನಗೆ ಸ್ವಿಮ್ಮಿಂಗ್ ಹೇಳಿಕೊಡುವುದರಿಂದ ಹಿಡಿದು ಒಟ್ಟಿಗೇ ಶಾಪಿಂಗ್ ಮಾಡಿದ್ದು, ನನ್ನ ಸಿನಿಮಾ ಸ್ಕ್ರೀನಿಂಗ್ ವೇಳೆ ಒಟ್ಟಿಗೇ ವಿಶಲ್ ಹೊಡೆಯುವುದರವರೆಗೆ ನಿನ್ನನ್ನು ನೋಡಿದ್ದೇನೆ. ಇಂದು ನೀನು ಬೆಳೆದು ನಿಂತಿರುವುದು ಎಲ್ಲರಿಗೂ ಮಾದರಿ. ಯಾವತ್ತೂ ನಿನ್ನ ಗೆಳತಿಯಾಗಿಯೇ ಇರಲು ಬಯಸುತ್ತೇನೆ ಎಂದಿದ್ದಾರೆ. ಇವರ ಈ ಬಾಂಧವ್ಯ ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಅಕ್ಕ-ತಂಗಿಯರ ಹಾಗಿದ್ದೀರಿ ಎಂದು ಕಾಮೆಂಟ್ ಮಾಡಿದರೆ ಇಬ್ಬರೂ ಛಲಗಾತಿಯರು ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ.