Publish Date: Thu, 23 Jan 2020 (09:17 IST)
Updated Date: Thu, 23 Jan 2020 (09:18 IST)
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಬರ್ತ್ ಡೇಗೆ ರಚಿತಾ ರಾಮ್ ಶುಭ ಹಾರೈಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಮದುವೆಯಾಗುತ್ತಾರೆ ಎಂಬ ರೂಮರ್ ಹೆಚ್ಚಾಗಿತ್ತು. ಕೊನೆಗೂ ಈ ಬಗ್ಗೆ ರಚಿತಾ ಸ್ಪಷ್ಟನೆ ಕೊಟ್ಟಿದ್ದಾರೆ.
ನಿನ್ನೆ ಇಬ್ಬರ ಫೋಟೋ ನೋಡಿ ನೆಟ್ಟಿಗರು ನಿಮ್ಮ ಮದುವೆ ಯಾವಾಗ ಎಂದು ಕಾಮೆಂಟ್ ಮಾಡಿದ್ದರು. ಈ ಗಾಸಿಪ್ ಗಳಿಂದ ಬೇಸತ್ತ ರಚಿತಾ ರಾಮ್ ಇನ್ ಸ್ಟಾಗ್ರಾಂ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.
‘ನನ್ನ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಕಳೆದ ಕೆಲವು ದಿನಗಳಿಂದ ಹಬ್ಬುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು. ನನ್ನ ಸಿನಿಮಾ ವಿಚಾರಗಳಾಗಲಿ, ವೈಯಕ್ತಿಕ ವಿಚಾರಗಳಾಗಲಿ ನನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದರೆ ಮಾತ್ರ ಸತ್ಯ ಎಂದು ಪರಿಗಣಿಸಿ. ಮನರಂಜನೆಗಾಗಿ ಸುಳ್ಳು ವದಂತಿಗಳನ್ನು ಸೃಷ್ಟಿ ಮಾಡಿದರೆ ಖುಷಿಯುಂಟಾಗಬಹುದು. ಆದರೆ ಅದರಿಂದ ನನಗೆ ಹಾಗೂ ವದಂತಿಗಳಲ್ಲಿ ಸಿಲುಕಿದ ಸಂಬಂಧಪಟ್ಟ ವ್ಯಕ್ತಿಗಳಿಗೆ ಬೇಸರ ಉಂಟಾಗುತತದೆ ಎಂಬ ವಿಷಯ ಅರ್ಥ ಮಾಡಿಕೊಂಡರೆ ಉತ್ತಮ.
ಅತೀ ಮುಖ್ಯವಾದ ವಿಚಾರವೆಂದರೆ ಸದ್ಯಕ್ಕೆ ನನ್ನ ಮದುವೆ ನಿಶ್ಚಯವಾಗಿಲ್ಲ. ನಾನು ಮದುವೆ ಆಗುವ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ತಿಳಿಸಿ ಎಲ್ಲರ ಸಮ್ಮುಖದಲ್ಲಿ ಗುರು ಹಿರಿಯರ ಆಶೀರ್ವಾದದೊಂದಿಗೆ ಆಗುತ್ತೇನೆ. ಸುಳ್ಳು ವದಂತಿಗಳನ್ನು ನಂಬಿ ವೈಯಕ್ತಿಕ ವಿಚಾರಗಳ ಬಗ್ಗೆ ನಗೆಪಾಟಲು ಮಾಡಬೇಡಿ ಎಂದು ವಿನಮ್ರತೆಯಿಂದ ಕೇಳಿಕೊಳ್ಳುತ್ತೇನೆ’ ಎಂದು ರಚಿತಾ ಸುದೀರ್ಘವಾಗಿ ಬರೆದು ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.