ಬೆಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ದೈವದ ಅನುಕರಣೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ ಹೊಂಬಾಳೆ ಫಿಲಂಸ್ ಗೆ ನೆಟ್ಟಿಗರು ನೀವು ದೈವದ ಅನುಕರಣೆ ಮಾಡಬಹುದು ನಾವು ಮಾಡಬಾರದಾ ಎಂದು ಪ್ರಶ್ನಿಸಿದ್ದಾರೆ.
ಕಾಂತಾರ ಚಾಪ್ಟರ್ 1 ಸಿನಿಮಾ ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ ದೈವದ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಪರಿಣಾಮ ಕೆಲವರು ತಾವೂ ದೈವದ ಅನುಕರಣೆ ಮಾಡುತ್ತಿದ್ದಾರೆ.
ಇದರ ಬೆನ್ನಲ್ಲೇ ರಿಷಬ್ ಶೆಟ್ಟಿಗೆ ತುಳುಕೂಟ ಪತ್ರ ಬರೆದು ಇಂತಹ ಹುಚ್ಚಾಟಗಳನ್ನು ನಿಲ್ಲಿಸುವಂತೆ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಹೊಂಬಾಳೆ ಫಿಲಂಸ್ ದೈವದ ಅನುಕರಣೆ ಮಾಡುವುದು ದೈವಕ್ಕೆ ಮಾಡುವ ಅವಮಾನ. ಇಂತಹ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು.
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಸಿನಿಮಾದಲ್ಲಿ ರಿಷಬ್ ಶೆಟ್ಟಿ ದೈವದ ಅನುಕರಣೆ ಮಾಡಬಹುದು. ನಾವು ಮಾಡಿದರೆ ತಪ್ಪಾ ಎಂದು ಪ್ರಶ್ನಿಸಿದ್ದಾರೆ. ಆದರೆ ಅಸಲಿಗೆ ರಿಷಬ್ ಕೂಡಾ ಈ ಪಾತ್ರ ಮಾಡಲು ಅಷ್ಟೇ ಕಟ್ಟುನಿಟ್ಟಿನ ನಿಯಮ ಪಾಲನೆ, ಶಿಸ್ತು ಪಾಲಿಸುತ್ತಾರೆ. ಆದರೆ ಸಿನಿಮಾ ನೋಡಿ ಮೈಮೇಲೆ ಆವೇಷ ಬಂದವರಂತೆ, ದೈವದ ಧ್ವನಿಯನ್ನು ಅನುಕರಣೆ ಮಾಡುವುದು ಕೇವಲ ರೀಲ್ಸ್ ಮತ್ತು ವ್ಯೂ ಗಾಗಿ ಇಂತಹದ್ದೆಲ್ಲಾ ಮಾಡುತ್ತಿದ್ದಾರೆ. ಇದಕ್ಕೆ ಹೊಂಬಾಳೆ ಫಿಲಂಸ್ ಮತ್ತು ದೈವಾರಾಧಾಕರು, ಭಕ್ತರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.