ಕೊಚ್ಚಿ: ಕಾಂತಾರ ಚಾಪ್ಟರ್ 1 ರಲ್ಲಿ ರಾಜ ರಾಜಶೇಖರನ ಪಾತ್ರ ಮಾಡಿದ್ದ ಮಲಯಾಳಂನ ಖ್ಯಾತ ನಟ ಜಯರಾಂ, ರಿಷಬ್ ಶೆಟ್ಟಿ ಬಗ್ಗೆ ಹೊಗಳಿಕೆಯ ಮಹಾಪೂರವೇ ಹರಿಸಿದ್ದು ನಾವು ಅವರಿಂದ ಕಲಿಯುವುದು ತುಂಬಾ ಇದೆ ಎಂದಿದ್ದಾರೆ.
ಕಾಂತಾರ ಚಾಪ್ಟರ್ 1 ಸಿನಿಮಾ ಸಕ್ಸಸ್ ಬಗ್ಗೆ ಮಲಯಾಳಂ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ರಿಷಬ್ ಶೆಟ್ಟಿಯನ್ನು ಹಾಡಿ ಹೊಗಳಿದ್ದಾರೆ. ಆತ ನಿಜವಾಗಿಯೂ ಒಬ್ಬ ಅದ್ಭುತ ಮತ್ತು ವಿಶೇಷ ವ್ಯಕ್ತಿ ಎಂದಿದ್ದಾರೆ.
ಕಾಂತಾರ ಮೊದಲ ಸಿನಿಮಾ ಬಂದಾಗ ನನಗೆ ಒಮ್ಮೆ ರಿಷಬ್ ಜೊತೆ ಮಾತನಾಡಬೇಕು ಎಂದು ಅನಿಸಿತ್ತು. ಅದೃಷ್ಟವಶಾತ್ ಅವರೇ ಒಮ್ಮೆ ನನಗೆ ಕರೆ ಮಾಡಿದರು. ನಾನು ಆಗ ನಿಮ್ಮ ಫ್ಯಾನ್ ಎಂದು ಹೇಳಿದೆ. ಅದಕ್ಕೆ ಅವರು ನಾನು ಹಲವು ವರ್ಷಗಳಿಂದ ನಿಮ್ಮ ಫ್ಯಾನ್. ನಿಮ್ಮ ಸಿನಿಮಾಗಳನ್ನು ನೋಡುತ್ತಾ ಬಂದಿದ್ದೇನೆ ಎಂದರು. ನಂತರ ನನಗೆ ಕಾಂತಾರ ಚಾಪ್ಟರ್ 1 ರಲ್ಲಿ ನೀವು ಒಂದು ಪಾತ್ರ ಮಾಡಬೇಕು ಎಂದು ಕರೆದರು.
ಕುಂದಾಪುರದ ಬಳಿ ಸೆಟ್ ಒಂದರಲ್ಲಿ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದರು. ಅವರು ಎಲ್ಲಾ ಪಾತ್ರಗಳಿಗೂ ಎಷ್ಟು ಹೋಂ ವರ್ಕ್ ಮಾಡಿಕೊಂಡಿದ್ದರು ಎಂದರೆ ನನ್ನ ಲುಕ್ ಹೇಗಿರಬೇಕು, ಪ್ರತೀ ಸನ್ನಿವೇಶದಲ್ಲಿ ನನ್ನ ಮುಖಭಾವ ಹೇಗಿರಬೇಕು ಎಂದು ಎಲ್ಲವನ್ನೂ ಚಿತ್ರ ಬರೆದು ತಯಾರಿ ಮಾಡಿದ್ದರು. ಹೀಗಾಗಿ ನನಗೆ ಅಭಿನಯಿಸುವುದು ಸುಲಭವಾಯಿತು. ಅಲ್ಲಿಗೆ ಹೋದ ಮೇಲೆಯೇ ನನಗೆ ಸಿನಿಮಾದಲ್ಲಿ ಎಷ್ಟು ಮಹತ್ವದ ಪಾತ್ರ ನೀಡಿದ್ದಾರೆ ಎಂದು ಗೊತ್ತಾಗಿದ್ದು.