ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಪೊಲೀಸರ ಅನುಮಾನ ಇನ್ನೂ ತೀರಿಲ್ಲ. ಸಾವಿನ ರಹಸ್ಯ ಬೇಧಿಸಲು ಪೊಲೀಸರು ಮುಂದಾಗಿದ್ದಾರೆ.
ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಮೃತದೇಹ ಅವರ ಅಪಾರ್ಟ್ ಮೆಂಟ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿಪತ್ತೆಯಾಗಿತ್ತು. ವಿಪರೀತ ಸಾಲ ಮಾಡಿದ್ದ ಗುರುಪ್ರಸಾದ್ ತೀರಿಸಲಾಗದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಅವರ ಎರಡನೇ ಪತ್ನಿ ಹೇಳಿಕೆ ನೀಡಿದ್ದರು.
ಆದರೆ ಇಷ್ಟಕ್ಕೇ ಪೊಲೀಸರು ಸುಮ್ಮನಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ಗುರುಪ್ರಸಾದ್ ಸಾವನ್ನಪ್ಪಿ ಮೂರು ದಿನಗಳಾಗಿರಬಹುದು. ಇಷ್ಟು ದಿನಗಳಾಗಿದ್ದರೂ ಅವರ ಸಾವಿನ ಸಂಗತಿ ಯಾರಿಗೂ ಗೊತ್ತಾಗದೇ ಹೋಗಿದ್ದು ಯಾಕೆ ಎಂದು ಎಲ್ಲರೂ ಅಚ್ಚರಿಪಡುವಂತಾಗಿದೆ.
ಇನ್ನು, ಅವರಿಗೆ ಸಾಲಗಾರರು ಬೆದರಿಕೆ ಹಾಕಿದ್ದರೇ, ಮಾನಸಿಕ ಒತ್ತಡಕ್ಕೊಳಗಾಗಿದ್ದಾರೇ ಎಂಬಿತ್ಯಾದಿ ವಿಚಾರಗಳನ್ನು ತಿಳಿಯಲು ಪೊಲೀಸರು ಈಗ ಅವರ ಲ್ಯಾಪ್ ಟಾಪ್ ಮತ್ತು ಮೊಬೈಲ್ ಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಿದ್ದಾರೆ. ಸಾವಿಗೆ ಮುನ್ನ ಡೆತ್ ನೋಟ್ ಏನಾದರೂ ಮೊಬೈಲ್, ಲ್ಯಾಪ್ ಟಾಪ್ ನಲ್ಲಿ ಸೇವ್ ಮಾಡಿರಬಹುದೇ ಎಂಬಿತ್ಯಾದಿ ವಿವರಗಳನ್ನು ಪಡೆಯಲಿದ್ದಾರೆ.