Publish Date: Mon, 13 May 2024 (14:52 IST)
Updated Date: Mon, 13 May 2024 (14:55 IST)
ಮಂಡ್ಯ: ಮೊನ್ನೆ ತಡರಾತ್ರಿ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಕನ್ನಡ, ತೆಲುಗು ಕಿರುತೆರೆ ನಟಿ ಪವಿತ್ರಾ ಜಯರಾಂ ಅಂತ್ಯ ಕ್ರಿಯೆ ಇಂದು ಮಂಡ್ಯದಲ್ಲಿ ನಡೆದಿದೆ. ಅಪಘಾತದ ವೇಳೆ ಜೊತೆಗಿದ್ದ ಸ್ನೇಹಿತ ಚಂದ್ರು ಆಕೆಗೆ ಏನಾಗಿತ್ತು ಎಂಬುದನ್ನು ವಿವರವಾಗಿ ಹೇಳಿದ್ದಾರೆ.
ಇಂದು ಮಂಡ್ಯದಲ್ಲಿ ಊರವರ ಸಮ್ಮುಖದಲ್ಲಿ ಪವಿತ್ರಾ ಮೃತದೇಹಕ್ಕೆ ಮಕ್ಕಳು ಅಗ್ನಿಸ್ಪರ್ಶ ಮಾಡಿದರು. ಪುತ್ರಿ ಮತ್ತು ಪುತ್ರ ಜೊತೆ ಸೇರಿಕೊಂಡು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಈ ವೇಳೆ ಮಕ್ಕಳ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಅಪಘಾತದ ಸಂದರ್ಭದಲ್ಲಿ ಪವಿತ್ರಾ ಜೊತೆಗಿದ್ದ ಸ್ನೇಹಿತ ಚಂದ್ರು ಘಟನೆ ಬಗ್ಗೆ ಇಂಚಿಂಚೂ ವಿವರ ನೀಡಿದ್ದಾರೆ. ಅಪಘಾತದಲ್ಲಿ ನನಗೆ ಕೈ, ಕಾಲು ಫ್ರಾಕ್ಚರ್ ಆಗಿತ್ತು. ನನ್ನ ಪಕ್ಕವೇ ಪವಿತ್ರಾ ಕೂತಿದ್ದರು ಅವರಿಗೆ ಹೆಚ್ಚೇನೂ ಆಗಿರಲಿಲ್ಲ. ಎದುರು ಡ್ರೈವರ್ ಮತ್ತು ಅವರ ಜೊತೆಗೆ ಕೂತಿದ್ದ ಇನ್ನೊಬ್ಬರಿಗೂ ಏನೂ ಆಗಿರಲಿಲ್ಲ. ಅಪಘಾತವಾದಾಗ ಭಯಗೊಂಡು ಪವಿತ್ರ ಏನಾಯ್ತು ಏನಾಯ್ತು ಎಂದು ಏದುಸಿರು ಬಿಡುತ್ತಾ ಕೇಳಿದ್ದರು. ಹಾಗೆ ಕೇಳುತ್ತಲೇ ಅವರು ಕೊನೆಯುಸಿರೆಳೆದರು ಎಂದು ಸ್ನೇಹಿತ ಅಳುತ್ತಾ ಹೇಳಿದ್ದಾರೆ.
ಅಪಘಾತವಾದ ತಕ್ಷಣ ಆಂಬ್ಯುಲೆನ್ಸ್ ಬಂದಿದ್ದರೆ ಪವಿತ್ರಾ ಬದುಕುಳಿಯುತ್ತಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ. ಅಪಘಾತವಾಗಿ 20 ನಿಮಿಷ ಬಳಿಕ ಆಂಬ್ಯುಲೆನ್ಸ್ ಬಂದಿತ್ತು. ಬಹುಶಃ ತಕ್ಷಣವೇ ಆಂಬ್ಯುಲೆನ್ಸ್ ಬಂದಿದ್ದರೆ ಜೀವ ಬದುಕಿಕೊಳ್ಳುತ್ತಿತ್ತು ಎಂದು ಪವಿತ್ರಾ ಬಾವ ಲೋಕೇಶ್ ಮಾಧ‍್ಯಮಗಳಿಗೆ ತಿಳಿಸಿದ್ದಾರೆ.