Publish Date: Mon, 13 May 2024 (10:13 IST)
Updated Date: Mon, 13 May 2024 (10:19 IST)
ಮಂಡ್ಯ: ಮೊನ್ನೆ ತಡರಾತ್ರಿ ರಸ್ತೆ ಅಪಘಾತದಲ್ಲಿ ನಿಧನರಾದ ಪವಿತ್ರಾ ಜಯರಾಂ ಅಂತ್ಯ ಕ್ರಿಯೆ ಇಂದು ತವರೂರು ಮಂಡ್ಯದಲ್ಲಿ ನಡೆಯಲಿದೆ. ಹೈದರಾಬಾದ್ ನಲ್ಲಿ ಮೃತದೇಹ ಪೋಸ್ಟ್ ಮಾರ್ಟಂ ಮುಗಿಸಿ ತವರಿಗೆ ಕರೆತರಲಾಗುತ್ತಿದೆ.
ಮಕ್ಕಳನ್ನು ರಜೆಯಲ್ಲಿ ಚೆನ್ನೈಗೆ ಕರೆದೊಯ್ದಿದ್ದ ಪವಿತ್ರ ಮರಳಿ ಅವರನ್ನು ಮಂಡ್ಯಕ್ಕೆ ಬಿಟ್ಟು ಹೈದರಾಬಾದ್ ಗೆ ತೆರಳುವಾಗ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಪವಿತ್ರ ಪ್ರಯಾಣಿಸುತ್ತಿದ್ದ ಕಾರು, ಬಸ್ ಗೆ ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಪುಡಿಯಾಗಿದೆ.
ಪವಿತ್ರಾ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿದ್ದರೂ ಮೂಲತಃ ಕನ್ನಡಿಗರು, ಮಂಡ್ಯದಲ್ಲಿ ಮನೆಯಿದ್ದು, ಕುಟುಂಬಸ್ಥರು ಇಲ್ಲಿಯೇ ಇದ್ದಾರೆ. ಶೂಟಿಂಗ್ ನಿಮಿತ್ತ ಹೈದರಾಬಾದ್, ಚೆನ್ನೈ ಎಂದು ತೆರಳುತ್ತಿದ್ದ ಪವಿತ್ರಾ ತಿಂಗಳಿಗೊಮ್ಮೆಯಾದರೂ ತವರಿಗೆ ಬರುತ್ತಿದ್ದರಂತೆ. ಆದರೆ ಈ ಬಾರಿ ಬಂದು ಹೋದವರು ಇನ್ನೆಂದೂ ಬಾರದ ಲೋಕಕ್ಕೆ ತೆರಳಿದ್ದಾರೆ.
ಅವರನ್ನು ತವರಿನಲ್ಲೇ ಮಣ್ಣಾಗಿಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಹೀಗಾಗಿ ಮಂಡ್ಯಕ್ಕೆ ಮೃತದೇಹ ಕರೆತಂದು ಅಂತ್ಯ ಕ್ರಿಯೆ ನಡೆಸಲಾಗುತ್ತಿದೆ. ಪವಿತ್ರಾ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.